ಬೆಲೆ ಏರಿಕೆ ವಿರುದ್ಧ ಎತ್ತಿನಗಾಡಿ ಚಳುವಳಿ : ಎಂಎಲ್ ಸಿ ವೀಣಾಅಚ್ಚಯ್ಯ ಭಾಗಿ

13/09/2021

ಬೆಂಗಳೂರು ಸೆ.13 : ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು 25 ರೂಪಾಯಿಗಳಷ್ಟು, ಅಡುಗೆ ಅನಿಲ ಬೆಲೆಯನ್ನು 150 ರೂಪಾಯಿಯಷ್ಟು ಕಡಿಮೆ ಮಾಡಬೇಕೆಂದು ಆಗ್ರಹಿಸಿ ಕಾಂಗ್ರೆಸ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ಎತ್ತಿನಗಾಡಿ ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಶಾಂತೆಯಂಡ ವೀಣಾಅಚ್ಚಯ್ಯ ಭಾಗಿಯಾದರು.
ಇಂದಿನಿಂದ ವಿಧಾನಸಭಾ ಅಧಿವೇಶನ ಆರಂಭವಾಗುತ್ತಿರುವ ಹಿನ್ನೆಲೆ ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ಖಂಡಿಸಿ ಕಾಂಗ್ರೆಸ್ ಶಾಸಕರು ಎತ್ತಿನ ಗಾಡಿ ಮೂಲಕ ವಿಧಾನಸಭೆಗೆ ಆಗಮಿಸಿದರು. ಈ ಸಂದರ್ಭ ವೀಣಾಅಚ್ಚಯ್ಯ ಅವರು ಕೂಡ ಎತ್ತಿನಗಾಡಿ ಏರಿ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಜನಸಾಮಾನ್ಯರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರ ಬೆಲೆ ಏರಿಕೆ ಮಾಡುವ ಮೂಲಕ ಗಾಯದ ಮೇಲೆ ಬರೆ ಎಳೆಯುತ್ತಿದೆ ಎಂದು ಆರೋಪಿಸಿದರು.
ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಮಲಿಂಗಾ ರೆಡ್ಡಿ ಸೇರಿದಂತೆ ಹಲವು ನಾಯಕರು ಎತ್ತಿನ ಗಾಡಿಯನ್ನು ಏರಿ ವಿಧಾನಸೌಧ ಚಲೋ ನಡೆಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.