ಪಠ್ಯ ಪುಸ್ತಕ ತಿದ್ದುಪಡಿ ಪ್ರಸ್ತಾಪ : ತೀವ್ರ ವಿರೋಧ

13/09/2021

ಮಡಿಕೇರಿ,ಸೆ.13 : ಪಠ್ಯ ಪುಸ್ತಕಗಳಲ್ಲಿನ ಕೆಲವು ಪಾಠಗಳನ್ನು ಕಡಿತಗೊಳಿಸಲು ಮುಂದಾಗಿರುವ ರಾಜ್ಯ ಬಿಜೆಪಿ ಸರ್ಕಾರದ ಕ್ರಮವನ್ನು ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟುಡೆಂಟ್ಸ್ ಆರ್ಗನೈಸೇಷನ್(ಎಐಡಿಎಸ್‍ಓ) ತೀವ್ರವಾಗಿ ಖಂಡಿಸಿದೆ.

ಈ ಕುರಿತು ಎಐಡಿಎಸ್‍ಓ ಕೊಡಗು ಜಿಲ್ಲಾ ಘಟಕದ ಸಹ ಸಂಚಾಲಕರಾದ ಸಂಗೀತ ಅವರು ನೀಡಿರುವ ಹೇಳಿಕೆಯಲ್ಲಿ, ರಾಜ್ಯ ಸರ್ಕಾರದ ಸುತ್ತೋಲೆ ಅನ್ವಯ, 6ನೇ ತರಗತಿ ಸಮಾಜ ವಿಜ್ಞಾನ ವಿಭಾಗ 1ರಲ್ಲಿನ ಪಾಠ 7 ‘ಹೊಸ ಧರ್ಮಗಳ ಉದಯ’ ದ ಪುಟ 82, 83 ರನ್ನು ಕೈಬಿಡಲು ಸೂಚಿಸಲಾಗಿದೆ. ವೈದಿಕ ಧರ್ಮಗಳಲ್ಲಿದ್ದ ದೋಷಗಳಿಂದಾಗಿಯೇ ಹೊಸ ಧರ್ಮಗಳ ಉದಯವಾದವು ಎಂಬ ಸಾರಾಂಶವಿದ್ದ ಈ ಪಾಠವನ್ನು ಸಂಪೂರ್ಣ ಕಿತ್ತು ಹಾಕಲು ಆದೇಶ ನೀಡಿರುವುದು ರಾಜ್ಯ ಸರ್ಕಾರದ ಅತ್ಯಂತ ಅಪ್ರಜಾತಾಂತ್ರಿಕ ಮತ್ತು ಅವೈಜ್ಞಾನಿಕ ಧೋರಣೆಯೆಂದು ಟೀಕಿಸಲಾಗಿದೆ.

ಈ ಹಿಂದೆ ಇಂತಹ ಪ್ರಯತ್ನ ನಡೆದಿತ್ತಾದರು ವಿರೋಧದ ಹಿನ್ನೆಲೆಯಲ್ಲಿ ಅದನ್ನು ಜಾರಿಗೊಳಿಸದೆ ಹಿಂಪಯಲಾಗಿತ್ತು. ಈಗ ನೂತನ ಮಂತ್ರಿಮಂಡಲ ರಚನೆಯಾಗುತ್ತಿದ್ದಂತೆಯೇ, ಯಾವ ಗಣ್ಯರ ಅಭಿಪ್ರಾಯಕ್ಕೂ ಗೌರವ ಕೊಡದೇ ಪಠ್ಯಪುಸ್ತಕ ಪರಿಶೀಲನೆಗೆ ಮುಂದಾಗಿರುವುದು ಸರಿಯಲ್ಲವೆಂದು ತಿಳಿಸಲಾಗಿದೆ.

ಒಂದು ಸಮಗ್ರ ಪಠ್ಯದಲ್ಲಿ ಹಲವು ಐತಿಹಾಸಿಕ ಸತ್ಯಗಳು, ವೈಜ್ಞಾನಿಕ ಸತ್ಯಗಳು ಇರಲೇಬೇಕು. ಸತ್ಯವನ್ನು ಮಕ್ಕಳಿಗೆ ಹೇಳಬೇಕು ಮತ್ತು ಇದು ದಶಕಗಳಿಂದಲೂ ನಡೆದು ಬಂದಿರುವ ಪರಿಪಾಠ. ವೇದಗಳಲ್ಲಿ ಕೆಲವು ಧನಾತ್ಮಕ ಅಂಶಗಳೊಂದಿಗೆ, ನ್ಯೂನತೆಗಳು ಸಹ ಇದ್ದವು ಎಂಬುದು ಒಂದು ಐತಿಹಾಸಿಕ ಸತ್ಯ. ಈ ನ್ಯೂನತೆಗಳನ್ನು ಹಲವು ವಿಜ್ಞಾನಿಗಳು, ಬರಹಗಾರರು, ಇತಿಹಾಸಕಾರರು, ಅಷ್ಟೇ ಏಕೆ ಮಹಾನ್ ಹಿಂದೂ ಧಾರ್ಮಿಕ ವ್ಯಕ್ತಿಯಾಗಿದ್ದ ಸ್ವಾಮಿ ವಿವೇಕಾನಂದರು ತೋರಿಸಿದ್ದಾರೆ. ಪಠ್ಯಪುಸ್ತಕದಲ್ಲಿ ಹೇಳಲಾಗಿರುವ ಸತ್ಯ ಆಳುವ ವರ್ಗಕ್ಕೆ ಅಥವಾ ಸಂಘಪರಿವಾರದ ವಿಚಾರಗಳಿಗೆ ವಿರುದ್ಧವಾಗಿದೆ ಅಥವಾ ಕೆಲವರ ಭಾವನೆಗೆ ನೋವುಂಟಾಗುತ್ತದೆ ಎಂಬ ನೆಪವೊಡ್ಡಿ, ಪಠ್ಯಪುಸ್ತಕವನ್ನು ತಿರುಚುವ ಹುನ್ನಾರ ಇದಾಗಿದೆಯೆಂದು ಆರೋಪಿಸಲಾಗಿದೆ.

ಕೂಡಲೇ ರಾಜ್ಯ ಸರ್ಕಾರ ಬೇಷರತ್ತಾಗಿ ತನ್ನ ನಿರ್ಧಾರವನ್ನು ಹಿಂಪಡೆಯಬೇಕು. ಇಂತಹ ನಿರ್ಧಾರವನ್ನು ಶಿಕ್ಷಣ ಪ್ರೇಮಿ ಜನತೆ, ವಿದ್ಯಾರ್ಥಿಗಳು, ಜನಸಾಮಾನ್ಯರು ಅತ್ಯಂತ ಉಗ್ರವಾಗಿ ಖಂಡಿಸಬೇಕು ಹಾಗು ಐತಿಹಾಸಿಕ-ವೈಜ್ಞಾನಿಕ ಸತ್ಯಗಳನ್ನು ಅನಾವರಣಗೊಳಿಸುವ ಪಠ್ಯಪುಸ್ತಕಗಳನ್ನು ಕೋಮುವಾದಿಕರಣಗೊಳಿಸಲು ಬಿಡಬಾರದು ಎಂದು ಎಐಡಿಎಸ್‍ಓ ಆಗ್ರಹಿಸುತ್ತದೆಂದು ತಿಳಿಸಿದ್ದಾರೆ.