ಗರ್ವಾಲೆಯ ಅಸಹಾಯಕ ಕೂಗು : ಪ್ರವಾಸಿಗರು ಹೆಚ್ಚಾದಂತೆ ಗ್ರಾಮಸ್ಥರ ನಡುವೆಯೇ ಘರ್ಷಣೆ ನಡೆಯುತ್ತಿದೆ

14/09/2021

ಮಡಿಕೇರಿ ಸೆ.14 : ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರವಾಸಿತಾಣಗಳಿಗೆ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೇ ಕಾರಣಕ್ಕೆ ಗ್ರಾಮಸ್ಥರ ನಡುವೆ ಘರ್ಷಣೆಗಳು ಏರ್ಪಡುತ್ತಿದೆ ಎಂದು ಶಿರಂಗಳ್ಳಿ ಗ್ರಾಮಾಭಿವೃದ್ಧಿ ಸಮಿತಿ ಹಾಗೂ ಸ್ಥಳೀಯ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಎಂ.ಎo.ಸಚಿನ್, ಅತಿಯಾದ ಪ್ರವಾಸಿಗರಿಂದ ಊರಿನ ನೆಮ್ಮದಿ ಹಾಳಾಗಿದೆ ಎಂದು ಗಮನ ಸೆಳೆದರು.
ಕೋಟೆಬೆಟ್ಟ ಮತ್ತಿತರ ಸ್ಥಳಗಳಿಗೆ ತೆರಳುವ ರಸ್ತೆ ಅತ್ಯಂತ ಕಿರಿದಾಗಿದ್ದು, ಪ್ರವಾಸಿ ವಾಹನಗಳಿಂದ ಅಡಚಣೆಯಾಗುತ್ತಿದೆ, ಅಲ್ಲದೆ ಅಶುಚಿತ್ವದಿಂದ ಅನಾರೋಗ್ಯಕರ ವಾತಾವರಣ ಸೃಷ್ಟಿಯಾಗುತ್ತಿದೆ. ಇದೇ ವಿಚಾರಕ್ಕೆ ಗೊಂದಲ ಏರ್ಪಟ್ಟು ಗ್ರಾಮಸ್ಥರ ನಡುವೆಯೇ ಸಂಘರ್ಷ ನಡೆಯುತ್ತಿದೆ. ಗ್ರಾಮದ ಕೆಲವರು ಪ್ರವಾಸಿಗರೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವುದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಪ್ರವಾಸಿಗರು ವ್ಯತಿರಿಕ್ತ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಇದರಿಂದ ಗ್ರಾಮಕ್ಕೆ ಕೆಟ್ಟ ಹೆಸರು ಬರುವ ಆತಂಕ ಎದುರಾಗಿದೆ.
ಗೊಂದಲ ನಿವಾರಣೆಗಾಗಿ ಗರ್ವಾಲೆ ಗ್ರಾ.ಪಂ ವ್ಯಾಪ್ತಿಗೆ ಒಳಪಡುವ ಶಿರಂಗಳ್ಳಿ, ಕಿರುದಾಲೆ, ಗರ್ವಾಲೆ, ಸೂರ್ಲಬಿ, ಕುಂಬಾರಗಡಿಗೆ, ಕಿಕ್ಕರಳ್ಳಿ ಮತ್ತು ಮಂಕ್ಯ ಗ್ರಾಮಸ್ಥರ ವಿಶೇಷ ಗ್ರಾಮಸಭೆಯನ್ನು ಇತ್ತೀಚೆಗೆ ನಡೆಸಲಾಯಿತು. ಆದರೆ ಪ್ರವಾಸಿ ವಿಚಾರಕ್ಕೆ ಸಂಬoಧಿಸಿದoತೆ ಮತ್ತೆ ಗದ್ದಲ ಏರ್ಪಟ್ಟು ಸಭೆಯನ್ನು ಮೊಟಕುಗೊಳಿಸಲಾಯಿತು.
ತುರ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸಂಬoಧಿಸಿದ ಇಲಾಖೆಗಳಿಗೆ ಮನವಿ ಸಲ್ಲಿಸಿದರೂ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಸಚಿನ್, ಸೆ.17ರ ಒಳಗಾಗಿ ಸಂಬoಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಶಿರಂಗಳ್ಳಿ ಬಸ್ ತಂಗುದಾಣದ ಎದುರು ರಸ್ತೆ ತಡೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸೂರ್ಲಬಿ ಗ್ರಾಮಸ್ಥರಾದ ಒ.ಎನ್.ಅಶೋಕ್, ಟಿ.ಇ.ಸೋಮಯ್ಯ, ಶಿರಂಗಳ್ಳಿ ಸ್ವಾಮಿ ವಿವೇಕಾನಂದ ಯುವಕ ಸಂಘದ ಅಧ್ಯಕ್ಷ ಎಂ.ಕೆ.ನಾಣಿಯಪ್ಪ, ಗ್ರಾಮಸ್ಥ ಸನ್ನಿ ಕಾರ್ಯಪ್ಪ ಹಾಗೂ ಕಿರುಗಾಲು ಗ್ರಾಮಸ್ಥ ಸಿ.ಜಿ.ಲೋಹಿತ್ ಉಪಸ್ಥಿತರಿದ್ದರು.