ಕೊಡಗು : ವಿದ್ಯಾರ್ಥಿಗಳ ಪಾಲಕರು ಕೋವಿಡ್ ಲಸಿಕೆ ಪಡೆದಿರುವುದನ್ನು ಖಚಿತಪಡಿಸಿಕೊಳ್ಳಬೇಕು

14/09/2021

ಮಡಿಕೇರಿ ಸೆ.14 : ಪ್ರಸ್ತುತ ಕೆಲ ದಿನಗಳಿಂದ ಜಿಲ್ಲೆಯಲ್ಲಿ ಕೋವಿಡ್-19 ಪಾಸಿಟಿವಿಟಿ ದರ ಶೇ.2 ಕ್ಕಿಂತ ಕಡಿಮೆ ಇದೆ. ಈ ಹಿನ್ನೆಲೆ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಪದವಿ, ತಾಂತ್ರಿಕ, ಡಿಪ್ಲೊಮಾ ಕಾಲೇಜುಗಳ ಸ್ನಾತಕೋತ್ತರ ತರಗತಿಗಳನ್ನು, ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರೌಢಶಾಲೆಗಳಲ್ಲಿನ 9 ಮತ್ತು 10 ನೇ ತರಗತಿಗಳು ಮತ್ತು ಪದವಿ ಪೂರ್ವ ಕಾಲೇಜುಗಳನ್ನು ಸೆ.17 ರಿಂದ ಪ್ರಾರಂಭಿಸುವ ಬಗ್ಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಆದೇಶ ಹೊರಡಿಸಿದ್ದಾರೆ.
ಹಿಂದುಳಿದ, ಅಲ್ಪಸಂಖ್ಯಾತರ, ಸಮಾಜ ಕಲ್ಯಾಣ ಮತ್ತಿತರ ಇಲಾಖೆಗಳ ಹಾಸ್ಟೆಲ್‌ಗಳ ಅಧಿಕಾರಿ, ಸಿಬ್ಬಂದಿಗಳು ಕನಿಷ್ಟ 1 ಕೋವಿಡ್-19 ಲಸಿಕೆ ಪಡೆದಿರತಕ್ಕದ್ದು.
ಶಾಲಾ ಕಾಲೇಜು, ವಿದ್ಯಾಸಂಸ್ಥೆ ಮತ್ತು ಹಾಸ್ಟೆಲ್‌ಗಳನ್ನು ನಿಯಮಾನುಸಾರ ಸ್ಯಾನಿಟೈಸ್ ಮಾಡುವುದು. ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಕಡ್ಡಾಯವಾಗಿ ಕನಿಷ್ಟ 1 ಕೋವಿಡ್-19 ಲಸಿಕೆ ಪಡೆದಿರಬೇಕು. ಪದವಿ ಮತ್ತು ಅದಕ್ಕೆ ಮೇಲ್ಪಟ್ಟ ವಿದ್ಯಾರ್ಥಿಗಳು ಕಡ್ಡಾಯವಾಗಿ ಕನಿಷ್ಟ 1 ಕೋವಿಡ್-19 ಲಸಿಕೆ ಪಡೆದಿರತಕ್ಕದ್ದು. ವಿದ್ಯಾರ್ಥಿಗಳ ಪಾಲಕರು ಕೋವಿಡ್-19 ಲಸಿಕೆ ಪಡೆದಿರುವುದನ್ನು ಖಚಿತಪಡಿಸಿಕೊಳ್ಳುವುದು. ಪ್ರತಿ ಶಿಕ್ಷಣ ಸಂಸ್ಥೆಯಲ್ಲಿ, ವಿದ್ಯಾರ್ಥಿ ನಿಲಯದಲ್ಲಿ ಒಂದು ಕೊಠಡಿಯನ್ನು ಐಸೋಲೋಷನ್ ಕೊಠಡಿ ಆಗಿ ಕಾಯ್ದಿರಿಸುವುದು. ಶಾಲಾ ಕಾಲೇಜು ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಾಮಾಣಿತ ಕಾರ್ಯಾಚರಣೆ ವಿಧಾನದಂತೆ ನಿಯಮಾನುಸಾರ ಸೂಕ್ತ ಕೆಎಸ್‌ಆರ್‌ಟಿಸಿ., ಖಾಸಗಿ ಸಾರಿಗೆ ವ್ಯವಸ್ಥೆ ಬಗ್ಗೆ ಕ್ರಮವಹಿಸುವುದು.
ಈ ಆದೇಶವು ಕರ್ನಾಟಕ ಸರ್ಕಾರವು ಕಾಲಕಾಲಕ್ಕೆ ನೀಡುವ ನಿರ್ದೇಶನಗಳಿಗೆ ಒಳಪಟ್ಟಿರುತ್ತದೆ. ಜಿಲ್ಲೆಯಲ್ಲಿ ಕೋವಿಡ್ ಪರಿಸ್ಥಿತಿಯನ್ನು ಪರಿಶೀಲಿಸಿ ಅಗತ್ಯ ಬದಲಾವಣೆಗಳನ್ನು ಜಿಲ್ಲಾಡಳಿತವು ಮುಂದಿನ ದಿನಗಳಲ್ಲಿ ನೀಡಲಿದೆ. ಈ ಆದೇಶದ ದುರುಪಯೋಗ ಅಥವಾ ಉಲ್ಲಂಘನೆಯು ವಿವಿಧ ಕಾಯ್ದೆಗಳಡಿ ದಂಡನೀಯವಾಗಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.