ಓಝೋನ್ ಪದರ ಭೂಮಿಯನ್ನು ರಕ್ಷಿಸುತ್ತದೆಯೇ ? ವಿಶೇಷ ಲೇಖನ : ಟಿ.ಜಿ.ಪ್ರೇಮಕುಮಾರ್

16/09/2021

ಮಡಿಕೇರಿ ಸೆ.16 :  ಪ್ರತಿವರ್ಷ ಸೆಪ್ಟೆಂಬರ್ 16 ರಂದು ವಿಶ್ವ ಓಝೋನ್ ಪದರ ಸಂರಕ್ಷಣಾ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ವಿಶ್ವ ಓಝೋನ್ ದಿನವು ಓಝೋನ್ ಪದರದ ಮಹತ್ವ , ಅದರ ಸವಕಳಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಅದನ್ನು ಸಂರಕ್ಷಿಸಲು ನಾವು ಕೈಗೊಳ್ಳಬೇಕಾದ ಸಂಭವನೀಯ ಪರಿಹಾರಗಳನ್ನು ಕಂಡುಕೊಳ್ಳಲು ಈ ದಿನವನ್ನು ಆಚರಿಸಲಾಗುತ್ತದೆ. ಮತ್ತು ಇದು ಪರಿಸರ ವ್ಯವಸ್ಥೆ ಹಾಗೂ ಮಾನವ ಜೀವನದ ಮೇಲೆ ಇದರ ಪಾತ್ರವನ್ನು ತಿಳಿಸುತ್ತದೆ.
ಓಝೋನ್ ಪದರವು ಭೂಮಿಯನ್ನು ಸೂರ್ಯನ ಕಿರಣಗಳ ಹಾನಿಕಾರಕ ಭಾಗದಿಂದ ರಕ್ಷಿಸುತ್ತದೆ.ಇದರಿಂದ ಭೂ ಗ್ರಹದ ಜೀವಿಗಳನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ವಿಶ್ವ ಓಝೋನ್ ಪದರದ ರಕ್ಷಣೆಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯು ಪ್ರತಿವರ್ಷ ಸೆಪ್ಟೆಂಬರ್ 16 ನ್ನು ವಿಶ್ವ ಓಝೋನ್ ದಿನವನ್ನಾಗಿ ಆಚರಿಸಲು ಕರೆ ನೀಡಿದೆ. ಈ ಆಚರಣೆಯು 1987 ರಲ್ಲಿ ಓಝೋನ್ ಪದರಕ್ಕೆ ಹಾನಿ ಉಂಟುಮಾಡುತ್ತಿರುವ ಪದಾರ್ಥಗಳ ವಿರುದ್ಧ ಮಾಂಟ್ರಿಯಲ್ ಪ್ರೋಟೊಕಾಲ್‌ಗೆ ಸಹಿಹಾಕಿದ ದಿನವನ್ನು ನೆನಪಿಸುತ್ತದೆ. 24 ರಾಷ್ಟ್ರಗಳ ಪ್ರತಿನಿಧಿಗಳು 1987 ರಲ್ಲಿ ಮಾಂಟ್ರಿಯಲ್‌ನಲ್ಲಿ ಸಭೆ ಸೇರಿ ಓಝೋನ್ ಪದರದ ನಾಶವನ್ನು ತಡೆಯಲು ಇದು ಸರಿಯಾದ ಸಮಯ ಎಂದು ಪ್ರಪಂಚಕ್ಕೆ ಘೋಷಿಸಿದರು. ಈ ರಾಷ್ಟ್ರಗಳು ಮಾಂಟ್ರಿಯಲ್ ಪ್ರೋಟೊಕಾಲ್ ಮೂಲಕ ಓಝೋನ್ ಪದರಕ್ಕೆ ಹಾನಿ ಉಂಟುಮಾಡುವ ಪದಾರ್ಥಗಳನ್ನು ವಿಮುಕ್ತಿಗೊಳಿಸುವಲ್ಲಿ ಬದ್ಧವಾಗಿವೆ.
ವಿಶ್ವ ಓಝೋನ್ ದಿನ 2021 ರ ಥೀಮ್ : ಓಝೋನ್ ಫಾರ್ ಲೈಫ್ : 36 ವರ್ಷಗಳ ಓಝೋನ್ ಲೇಯರ್ ಭದ್ರತೆ ಎಂಬುದು ವಿಶ್ವ ಓಝೋನ್ ದಿನ 2021 ರ ಘೋಷಣೆಯಾಗಿದೆ. ಈ ವರ್ಷ ನಾವು 36 ವರ್ಷಗಳ ಜಾಗತಿಕ ಓಝೋನ್ ಪದರ ರಕ್ಷಣೆಯ ದಿನವನ್ನಾಗಿ ಆಚರಿಸುತ್ತಿದ್ದೇವೆ.
19 ನೇ ಡಿಸೆಂಬರ್ 1994ರಂದು ವಿಶ್ವಸಂಸ್ಥೆಯ ಮಹಾ ಸಭೆಯು ಓಝೋನ್ ಪದರದ ರಕ್ಷಣೆಗೆ ಸಂಬಂಧಿಸಿದಂತೆ ಮಾಂಟ್ರಿಯಲ್ ಪ್ರೋಟೊಕಾಲ್‌ಗೆ ಸಹಿಹಾಕಿದ ದಿನದ ನೆನಪಿಗಾಗಿ ಸೆಪ್ಟೆಂಬರ್ 26 ನ್ನು ವಿಶ್ವ ಓಝೋನ್ ದಿನವನ್ನಾಗಿ ಆಚರಿಸಲು ಕರೆ ನೀಡಿತು. ಈ ದಿನವನ್ನು 1995 ರ ಸೆಪ್ಟೆಂಬರ್ 16 ರಂದು ಮೊದಲ ಬಾರಿಗೆ ಆಚರಿಸಲಾಯಿತು.
ವಿಶ್ವ ಓಝೋನ್ ದಿನವು ಓಝೋನ್ ಪದರದ ಮಹತ್ವ, ಪರಿಸರ ಮತ್ತು ಮಾನವ ಜೀವನದ ಮೇಲೆ ಇದರ ಪಾತ್ರವನ್ನು ತಿಳಿಸುತ್ತದೆ. ಈ ದಿಸೆಯಲ್ಲಿ ಓಜೋನ್ ಪದರ ರಕ್ಷಣೆ ಕುರಿತು ಜನಜಾಗೃತಿ ಮೂಡಿಸಲಾಗುತ್ತಿದೆ. ಸಕಲ ಜೀವರಾಶಿಗಳ ರಕ್ಷಾ ಕವಚ ಓಝೋನ್ ವಲಯ ಆಗಿದ್ದು, ಅದನ್ನು ಕಾಪಾಡಿಕೊಳ್ಳುವುದು ಮನುಷ್ಯನ ಆದ್ಯ ಕರ್ತವ್ಯವಾಗಿದೆ. ಮನುಷ್ಯನ ಅಟ್ಟಹಾಸಕ್ಕೆ ಬಲಿಯಾದ ವಸ್ತು – ವಿಶೇಷಗಳ ಪಟ್ಟಿಯಲ್ಲಿ ಓಝೋನ್ ಪದರವು ಒಂದು.
ಓಝೋನ್ ಪದರ ಇಲ್ಲದಿದ್ದರೆ ಭೂಮಿಯ ಜೀವಜಂತುಗಳು ಸೂರ್ಯನ ನೇರಳಾತೀತ ಕಿರಣಗಳ ನೇರ ಸ್ಪರ್ಶಕ್ಕೆ ಸಿಲುಕಿ ಕ್ಯಾನ್ಸರ್‌ನಂತಹ ಮಾರಕ ರೋಗಗಳಿಗೆ ಸಿಲುಕುತ್ತಿದ್ದವು ಎಂಬ ಆತಂಕವಿದೆ.
ಮಾಜಿ ರಾಷ್ಟ್ರಪತಿ ಡಾ|| ಎ.ಪಿ.ಜೆ.ಅಬ್ದುಲ್ ಕಲಾಂ ಅವರು ಮಾತಿನಂತೆ, ಈ ಭೂಮಂಡಲದ ಸಕಲ ಜೀವಿಗಳ ರಕ್ಷಣೆ ಮಾಡುವ ಓಝೋನ್ ಎಂಬ ಕವಚ ವಾಯುಮಂಡಲದಲ್ಲಿದೆ. ಆ ಪದರವೀಗ ಅಪಾಯದ ಹಂತದಲ್ಲಿದೆ. ಓಝೋನ್ ರಕ್ಷನೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸೆಪ್ಟೆಂಬರ್ 16 ರಂದು ವಿಶ್ವ ಓಝೋನ್ ಪದರ ಸಂರಕ್ಷಣಾ ದಿನವನ್ನಾಗಿ ಆಚರಿಸಲಾಗುತ್ತಿದೆ.
ಭೂಮಿ ಬದುಕಲು ಓಝೋನ್ ಬೇಕೇ -ಬೇಕು. ಮಳೆಗಾಲದಲ್ಲಿ ಕೊಡೆಯು ನಮ್ಮನ್ನು ಮಳೆಯಿಂದ ಹೇಗೆ ರಕ್ಷಿಸುತ್ತದೋ ಹಾಗೆ, ಓಝೋನ್ ಪದರ ಕೂಡ ನಮ್ಮನ್ನು ಸೂರ್ಯನಿಂದ ಬರುವ ನೇರಾಳತೀತ (ಅಲ್ಟ್ರಾ ವೈಲೆಟ್ ರೇ ಗಳು) ಕಿರಣಗಳಿಂದ ರಕ್ಷಿಸುತ್ತದೆ.
ಭೂಮಿಯ ಓಝೋನ್ ಪದರವೂ ಸೂರ್ಯನಿಂದ ಬರುವ ಕಾಸ್ಮಿಕ್ ಕಿರಣಗಳನ್ನು ಶೋಧಿಸಿ, ವಾತಾವರಣವನ್ನು ಶುದ್ಧವಾಗಿರಿಸಿದೆ. ಆದರೆ ನಾವು ವಾತಾವರಣಕ್ಕೆ ಹೆಚ್ಚಿನ ಕಾರ್ಬನ್ ಡೈ ಆಕ್ಸೆಡ್ ಅನ್ನು ಬಿಟ್ಟು ವಾಯುಮಂಡಲವನ್ನು ಮಲಿನಗೊಳಿಸುತ್ತಿದ್ದೇವೆ.
ಓಝೋನ್ ಪದರದ ಅಪಾಯಗಳು :
1980ಮತ್ತು 1990 ರಲ್ಲಿ ವಿಜ್ಞಾನಿಗಳು ಓಝೋನ್ ಪದರದಲ್ಲಿ ರಂಧ್ರಗಳಾಗಿರುವುದನ್ನು ಗಮನಿಸಿದರು. ನಂತರದ ದಿನಗಳಲ್ಲಿ ವಿಜ್ಞಾನಿಗಳು ಇದು ಕೇವಲ ರಂಧ್ರವಲ್ಲ ವಾಸ್ತವವಾಗಿ ಓಝೋನ್ ಸಂಪೂರ್ಣವಾಗಿ ಖಾಲಿಯಾಗಿರುವ ಓಝೋನ್ ಪದರದ ಪ್ರದೇಶ ಎಂದು ಅರಿತುಕೊಂಡರು. ಓಝೋನ್ ಪದರದ ಪ್ರದೇಶವು ಸೂರ್ಯನ ಕಿರಣವನ್ನು ಹೆಚ್ಚು ಹೀರದೆ ಅಥವಾ ಪ್ರತಿಫಲಿಸದೆ ನೇರವಾಗಿ ಭೂಮಿಗೆ ತಲುಪಿಸಿ ಭವಿಷ್ಯದಲ್ಲಿ ಮಾರಕವಾಗಿ ಪರಿಣಾಮ ಆಗಬಹುದೆನ್ನುವುದನ್ನು ಅರಿತರು.ದಕ್ಷಿಣ ಧ್ರುವ ಪ್ರದೇಶಗಳಲ್ಲಿ ಓಝೋನ್ ಪದರದ ಕ್ಷಿಪ್ರ ನಾಶಕ್ಕೆ ಕ್ಲೋರಿನ್ ಮತ್ತು ಬ್ರೋಮಿನ್‌ಗಳ ರಾಸಾಯನಿಕ ಕ್ರಿಯೆ ಕಾರಣವಾಗಿದೆ.2006 ರಿಂದ ಓಝೋನ್ ಪದರದಲ್ಲಿನ ರಂಧ್ರಗಳು ಕ್ರಮೇಣ ಕುಗ್ಗುತ್ತಿವೆ.
2009 ರ ನಂತರ ಓಝೋನ್ ಪದರದ ನಾಶಕ್ಕೆ ಕಾರಣವಾದ ೯೮% ರಷ್ಟು ಪದಾರ್ಥಗಳನ್ನು ನಿಷೇಧಿಸುವಲ್ಲಿ ಸಫಲವಾಯಿತು. ಆಗ ಎಲ್ಲಾ ದೇಶಗಳು ಒಟ್ಟಿಗೆ ಕೈ ಜೋಡಿಸಿ ಜಾಗತಿಕ ತಾಪಮಾನವನ್ನು 2 ಡಿಗ್ರಿ ಸೆಲ್ಸಿಯಸ್‌ಗೆ ಸೀಮಿತಗೊಳಿಸಲು ಒಪ್ಪಿದಾಗ ಈ ಕಾರ್ಯ ಸಂಭವನೀಯವೆನಿಸಿತು. ಇಲ್ಲಿಂದ ‘ಗ್ರಹದ ರಕ್ಷಣೆಗೆ ಹಸಿರನ್ನು ಬೆಳೆಯಿರಿ’ ಎಂಬ ಘೋಷಣೆ ಪ್ರಚಲಿತವಾಯಿತು.
ದಿನದ ಮಹತ್ವ : ವಿಶ್ವ ಓಝೋನ್ ಪದರ ಸಂರಕ್ಷಣಾ ದಿನದಂದು ವಿಶಿಷ್ಠವಾಗಿ ಪರಿಸರ ಸಂರಕ್ಷಣೆಯಲ್ಲಿ ಓಝೋನ್ ಪದರ ಸಂರಕ್ಷಣೆಯ ಮಹತ್ವವನ್ನು ತಿಳಿಸುವ ಮೂಲಕ ಸೂರ್ಯ, ಆಕಾಶ ಅಥವಾ ಭೂಮಿಯ ನೈಸರ್ಗಿಕ ಪರಿಸರದ ಚಿತ್ರಗಳನ್ನು ಬಳಸುವ ಮೂಲಕ ವಿದ್ಯಾರ್ಥಿಗಳು ಹಾಗೂ ನಾಗರಿಕರಲ್ಲಿ ಪರಿಸರ ಜಾಗೃತಿ ಮೂಡಿಸಬೇಕಾಗಿದೆ.
ವಿಷಯ/ಉದ್ಘೋಷಣೆ : 2012 ರಲ್ಲಿ ಮಾಂಟ್ರಿಯಲ್ ಪ್ರೋಟೊಕಾಲ್ ತನ್ನ 25 ನೇ ವಾರ್ಷಿಕೋತ್ಸವವನ್ನು ಪೂರೈಸಿತು. ವಿಶ್ವ ಸಂಸ್ಥೆಯ ಪರಿಸರ ಕಾರ್ಯಕ್ರಮದಲ್ಲಿ 2012 ರ ಕೇಂದ್ರ ವಿಷಯ ‘ಮುಂದಿನ ಪೀಳಿಗೆಗಾಗಿ ನಮ್ಮ ವಾಯುಮಂಡಲ ರಕ್ಷಿಸಿ’ ಎನ್ನುವುದಾಗಿತ್ತು. ಪ್ರಸಕ್ತ ಸಾಲಿನಲ್ಲಿ ಕೇಂದ್ರ ವಿಷಯವು ಆಗಿರುತ್ತದೆ.
ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮವು ರಾಷ್ಟ್ರ ಹಾಗೂ ಜನರಲ್ಲಿ ಜೀವನಮಟ್ಟವನ್ನು ಸ್ಪೂರ್ತಿದಾಯಕವಾಗಿ ಸುಧಾರಿಸಿ ಮುಂದಿನ ಪೀಳಿಗೆಗಾಗಿ ಶ್ರಮಿಸುವಲ್ಲಿ ಕಾರ್ಯ ನಿರತವಾಗಿದೆ.
ಓಝೋನ್ ಪದರ ಹಾನಿಯಿಂದ ಮಾನವನ ದೇಹಕ್ಕೆ, ಜೀವಸಂಕುಲಕ್ಕೆ ಜಲಚರಗಳಿಗೆ ಮಾರಕವಾಗಲಿದೆ. ಹಾಗೂ ಸಕಲ ಜೀವಿಗಳಿಗೆ ತೊಂದರೆ ಆಗಲಿದೆ. ಇದರ ಸಂರಕ್ಷಣೆಗೆ ಎಲ್ಲರೂ ಮುಂದಾಗಬೇಕಿದೆ.
ಆದ್ದರಿಂದ ನಾವು ಸಿ.ಎಫ್.ಸಿ. (CFC)  ರಹಿತ ರೆಫ್ರಿರೇಟರ್‌ಅನ್ನು ಉಪಯೋಗಿಸಬೇಕು. ಸೂರ್ಯನಿಂದ ಬರುವ ನೇರಾಳತೀತ ನೀಲ ಕಿರಣ (Ultra Violet Rays) ಗಳನ್ನು ತಡೆದು ಅಪಾಯವನ್ನು ತಪ್ಪಿಸುವಂತ ಓಝೋನ್ ಪದರ (Ozone layer)ಕ್ಕೆ ಧಕ್ಕೆ ಬರುತ್ತದೆ. ಅದಕ್ಕೆ ರಂಧ್ರವಾದರೆ ಕ್ಯಾನ್ಸರ್‌ನಂತಹ ಚರ್ಮರೋಗಗಳಿಗೆ ಕಾರಣವಾಗುತ್ತದೆ. ಆದ್ದರಿಂದ ನಾವು ಓಝೋನ್ ಪದರವನ್ನು ಸಂರಕ್ಷಿಸಬೇಕು. ಇದು ನಮ್ಮನ್ನು ರಕ್ಷಿಸುತ್ತದೆ.
ಓಝೋನ್ ಪದರಕ್ಕೆ ಯಾವುದೇ ರೀತಿಯಲ್ಲಿ ಹಾನಿಯಾಗದಂತೆ ನಾವು ಜಾಗ್ರತೆ ವಹಿಸಬೇಕಿದೆ. ಓಝೋನ್ ಪದರದ ನಾಶವನ್ನು ತಡೆಯಲು ಎಲ್ಲಾ ರಾಷ್ಟ್ರಗಳು ಸಂಘಟಿತರಾಗಿ ಪರಿಸರ ಮಾಲಿನ್ಯ ನಿಯಂತ್ರಣದೊಂದಿಗೆ ಜಾಗತಿಕ ತಾಪಮಾನ ತಡೆಗಟ್ಟುವ ಮೂಲಕ ಓಝೋನ್ ಪದರ ಸಂರಕ್ಷಿಸಬೇಕಿದೆ.
ಓಝೋನ್ ಪದರದ ಕ್ಷಿಪ್ರ ನಾಶಕ್ಕೆ ಕಾರಣವಾದ ಮಾಲಿನ್ಯಕಾರಕ ಪದಾರ್ಥಗಳು ವಾಯುಮಂಡಲಕ್ಕೆ ಸೇರದಂತೆ ನಾವು ಜಾಗ್ರತೆ ವಹಿಸಬೇಕು. ಇಲ್ಲದಿದ್ದಲ್ಲಿ ಓಜೋನ್ ಪದರ ಸಂಪೂರ್ಣ ನಾಶವಾದರೆ ಇಡೀ ಜೀವ ಸಂಕುಲಕ್ಕೆ ತೊಂದರೆಯಾಗುವ ಅಪಾಯವಿದೆ.
ಮುಂದಿನ ಪೀಳಿಗೆಗಾಗಿ ಪರಿಸರಕ್ಕೆ ಯಾವುದೇ ಧಕ್ಕೆಯನ್ನುಂಟುಮಾಡದೆ ನಾವು ವಾಯುಮಂಡಲ ರಕ್ಷಿಸಬೇಕಾಗಿದೆ.
ಪ್ರತಿಯೊಬ್ಬರೂ ತಮ್ಮನ್ನು ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಪರಿಸರ ಮಾಲಿನ್ಯ ತಡೆಗಟ್ಟಲು ಎಲ್ಲರೂ ಪ್ರಯತ್ನಿಸಬೇಕು ಓಜೋನ್ ಪದರದ ರಕ್ಷಣೆಯಲ್ಲಿ ನಾವು ವಹಿಸಬೇಕಾದ ಜವಾಬ್ದಾರಿ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು.
ಈ ದಿಸೆಯಲ್ಲಿ ನಾವು ವಾತಾವರಣದಲ್ಲಿ ಯಾವುದೇ ಮಾಲಿನ್ಯವನ್ನುಂಟು ಮಾಡದೆ ಪರಿಸರವನ್ನು ಸಂರಕ್ಷಿಸೋಣ. ಈ ಮೂಲಕ ನಾವು ಜಾಗತಿಕ ತಾಪಮಾನ ತಡೆಯುವ ಮೂಲಕ ಓಝೋನ್ ಪದರ ರಕ್ಷಿಸಿ ಭೂಮಂಡಲ ಹಾಗೂ ಜೀವಸಂಕುಲಗಳನ್ನು ಸಂರಕ್ಷಿಸಬೇಕಿದೆ.
ಬನ್ನಿ, ನಾವೆಲ್ಲ ಜತೆಗೂಡಿ ಓಝೋನ್ ಪದರ ಸಂರಕ್ಷಿಸಲು ಮಾಲಿನ್ಯರಹಿತ ಹಾಗೂ ಹಚ್ಚ ಹಸಿರು ಪರಿಸರ ನಿರ್ಮಿಸಲು ನಾವೆಲ್ಲರೂ ಪಣತೋಡೋಣ.
ಲೇಖನ : ಟಿ.ಜಿ.ಪ್ರೇಮಕುಮಾರ್,
ಮುಖ್ಯ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ,
ಕೂಡುಮಂಗಳೂರು, ಕೊಡಗು ಜಿಲ್ಲೆ
(ಮೊಬೈಲ್ : 94485 88352)

.