ಭಾಗಮಂಡಲ : ಮಹಾಮಳೆಯಿಂದ ಬದುಕು ಕಳೆದುಕೊಳ್ಳುವ ಆತಂಕದಲ್ಲಿದ್ದ ಅಕ್ಕಮ್ಮನವರ ಕೈ ಹಿಡಿದದ್ದು ಆ ಒಂದು ಯೋಜನೆ !

16/09/2021

ಮಡಿಕೇರಿ ಸೆ.16 : ಆಗಸ್ಟ್ 5 ,2020, ಭಾರೀ ಮಳೆಗೆ  ತಲಕಾವೇರಿ ಬ್ರಹ್ಮಗಿರಿ ತಪ್ಪಲಲ್ಲಿ ಸಂಭವಿಸಿದ ಭೂಕುಸಿತಕ್ಕೆ ಸಿಲುಕಿ, ತಲಕಾವೇರಿ ಪ್ರಧಾನ ಆರ್ಚಕರು ಸೇರಿದಂತೆ ಉಳಿದವರು ಸಾವನಪ್ಪಿದ್ದರು. ಅಂದಿನ ಕುಂಭದ್ರೋಣ ಮಳೆ ಸೃಷ್ಟಿಸಿದ ಅನಾಹುತಕ್ಕೆ ಜನಸಾಮಾನ್ಯ ಜೀವನ ಅಸ್ತವ್ಯಸ್ತ್ಯವಾಗಿತ್ತು. ಬರೆ ಕುಸಿತವು ಸಾಕಷ್ಟು ಆಸ್ತಿಯನ್ನು ಹಾನಿಗೊಳಿಸಿದ್ದವು. ಈ ರೀತಿಯ ವರುಣನ ಅವಕೃಪೆಗೆ ಮಡಿಕೇರಿ ತಾಲ್ಲೂಕು, ಭಾಗಮಂಡಲ ಗ್ರಾಮ ಪಂಚಾಯತಿ ವ್ಯಾಪ್ತಿಯ ತಾವೂರು ಗ್ರಾಮದ ಬಿ.ಎನ್.ಅಕ್ಕಮ್ಮ ಕುಟುಂಬವು ತುತ್ತಾಗಿತ್ತು.
12 ದನಗಳಿದ್ದ ಕೊಟ್ಟಿಗೆಯ ಮೇಲೆ ಬರೆ ಕುಸಿದು, ಕೊಟ್ಟಿಗೆ ಧ್ವಂಸವಾಗಿತ್ತು. ಒಂದು ದನ ಸ್ಥಳದಲ್ಲಿಯೆ ಮೃತಪಟ್ಟು, ಇನ್ನುಳಿದ ದನಗಳಿಗೆ ಗಂಭೀರ ಗಾಯಗಳಾಗಿದ್ದು ಅದೃಷ್ಟವಶಾತ್ ಬದುಕಿ ಉಳಿದಿದ್ದವು. ಈ ಅನಾಹುತದಿಂದ ಕುಟುಂಬಕ್ಕೆ ಆಘಾತ ಉಂಟಾಗಿತ್ತು.  ಆರ್ಥಿಕವಾಗಿ ಹಿಂದುಳಿದಿದ್ದ ಕಾರಣ  ತಕ್ಷಣಕ್ಕೆ ಹೊಸ ಕೊಟ್ಟಿಗೆ ಕಟ್ಟುವುದು ಅಸಾಧ್ಯದ ಮಾತಾಗಿತ್ತು.
ಆಗ ಕುಟುಂಬದ ನೆರವಿಗೆ ಬಂದದ್ದು #MGNREGA ಯೋಜನೆ, ಭಾಗಮಂಡಲ ಗ್ರಾಮ ಪಂಚಾಯತಿಯಲ್ಲಿ ವಿಚಾರಿಸಿದಾಗ, ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ವೈಯುಕ್ತಿಕ ಕಾಮಗಾರಿ ಆಡಿಯಲ್ಲಿ ದನದ ಕೊಟ್ಟಿಗೆ ನಿರ್ಮಿಸಲು ಅವಕಾಶವಿದೆ ಎಂಬ ಮಾಹಿತಿ ಲಭ್ಯವಾಯಿತು. ಅದರನ್ವಯ ಅಂದಾಜು ವೆಚ್ಚ 21,000 ರೂ. ನಲ್ಲಿ, 2 ತಿಂಗಳ ಒಳಗಾಗಿ ಸುಸಜ್ಜಿತ ದನದ ಕೊಟ್ಟಿಗೆ ನಿರ್ಮಿಸಲಾಯಿತು.
ಹಣಕಾಸಿನ ತೊಂದರೆಯಿದ್ದ ಕಾರಣ ಏನು ಮಾಡಬೇಕೆಂದು ತೋಚಲಿಲ್ಲ. ತಾತ್ಕಾಲಿಕವಾಗಿ ಟಾರ್ಪಲ್ ಹೊದಿಸಿ ದನಗಳಿಗೆ ಆಶ್ರಯ ಒದಗಿಸಿದ್ದೆವು. ವಿಪರೀತ ಮಳೆಯ ಕಾರಣ  ತೊಂದರೆಯಾಗುತ್ತಿತ್ತು. ಈ ಮೊದಲು ಮಣ್ಣಿನ ಕೊಟ್ಟಿಗೆ ಇತ್ತು, ಈ ಯೋಜನೆಯ ಮೂಲಕ ಸುಸಜ್ಜಿತ ಕೊಟ್ಟಿಗೆ ನಿರ್ಮಾಣವಾಯಿತು. ಮೂರು ಹಸುವಿದ್ದು, ತಿಂಗಳಿಗೆ ಹಾಲು ಮಾರಿ 3 ರಿಂದ 4 ಸಾವಿರ ಸಂಪಾದನೆಯಾಗುತ್ತಿದೆ. ಎತ್ತಿನ ಮೂಲಕ  ಉಳುಮೆ ಮಾಡುತ್ತೇವೆ ಹಾಗೂ ಗೊಬ್ಬರ  ಕೃಷಿ ಚಟುವಟಿಕೆಗೆ ಉಪಯೋಗವಾಗುತ್ತಿದೆ. ಈ ಯೋಜನೆಯಿಂದ ಬಹಳ ಸಹಾಯ ಸಹಾಯವಾಯಿತು ಎಂದು ಬಿ.ಎನ್ ಅಕ್ಕಮ್ಮರವರು ಸಂತಸ ವ್ಯಕ್ತಪಡಿಸಿದರು.
ಕುಗ್ಗಿದ ಕುಟುಂಬಗಳಿಗೆ ವರದಾನವಾಗಿರುವ #MGNREGA  ಯೋಜನೆಯ ಅನುಷ್ಠಾನಕ್ಕೆ ಕೊಡಗು ಜಿಲ್ಲಾ ಪಂಚಾಯತ್ ಅಧಿಕಾರಿಗಳು ಶ್ರಮಿಸುತ್ತಿದ್ದು, ಗ್ರಾಮಸ್ಥರು ಇದರ ಲಾಭ ಪಡೆದುಕೊಳ್ಳಬಹುದಾಗಿದೆ.