ದೇವಾಲಯಗಳ ತೆರವು ಕಾರ್ಯಾಚರಣೆ : ವಿರಾಜಪೇಟೆಯಲ್ಲಿ ಪ್ರತಿಭಟನೆ

17/09/2021

ಮಡಿಕೇರಿ ಸೆ.17 : ನ್ಯಾಯಾಲಯದ ಆದೇಶವನ್ನು ತಿರುಚಿ ಹಿಂದೂ ದೇವಾಲಯಗಳನ್ನು ಕೆಡವಿ ಹಾಕಲಾಗಿದೆ ಎಂದು ಆರೋಪಿಸಿ ಮತ್ತು ತೆರವು ಕಾರ್ಯಾಚರಣೆಗೆ ಆದೇಶ ನೀಡಿದ ಮೈಸೂರು ಜಿಲ್ಲೆಯ ಅಧಿಕಾರಿಗಳನ್ನು ಹುದ್ದೆಯಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ವಿರಾಜಪೇಟೆ ತಾಲ್ಲೂಕು ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗದಳ ಸಂಘಟನೆಗಳು ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದವು.
ರಾಜ್ಯ ಸರ್ಕಾರದ ನಿರ್ಲಕ್ಷ್ಯ ಮತ್ತು ಅಧಿಕಾರಿಗಳ ಕ್ರಮವನ್ನು ಖಂಡಿಸಿದ ಪ್ರತಿಭಟನಾಕಾರರು ಧಾರ್ಮಿಕ ಭಾವನೆಗೆ ದಕ್ಕೆ ತಾರದಂತೆ ಒತ್ತಾಯಿಸಿದರು.
ಸಂಘಟನೆಯ ಪ್ರಾಂತ ಸಹ ಸಂಚಾಲಕ ಮುರುಳಿಕೃಷ್ಣ ಹಸಂತಡ್ಕ ಮಾತನಾಡಿ ಪುರಾತನ ದೇವಾಲಯಗಳನ್ನು ನಿಯಮ ಬಾಹಿರವಾಗಿ ತೆರವುಗೊಳಿಸುವ ಮೂಲಕ ಹಿಂದೂ ಸಮಾಜಕ್ಕೆ ನೋವುಂಟು ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತೆರವುಗೊಳಿಸಿರುವ ದೇವಾಲಯಗಳ ಪುನರ್ ನಿರ್ಮಾಣಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕು, ತಪ್ಪಿದಲ್ಲಿ ಹಿಂದೂ ಸಂಘಟನೆಗಳೇ ದೇವಾಲಯವನ್ನು ನಿರ್ಮಿಸಲಿವೆ ಎಂದು ಎಚ್ಚರಿಕೆ ನೀಡಿದರು.
ಬಜರಂಗದಳದ ವಿರಾಜಪೇಟೆ ತಾಲ್ಲೂಕು ಅಧ್ಯಕ್ಷ ಸಣ್ಣುವಂಡ ಗಣೇಶ್ ಮೇದಪ್ಪ ಮಾತನಾಡಿ ಸನಾತನ ಧರ್ಮವನ್ನು ಅವಹೇಳನ ಮಾಡಿರುವ ರಾಜ್ಯ ಸರಕಾರ ದೇವಾಲಯಗಳನ್ನು ನಾಶ ಮಾಡಿ ಮೌನವಹಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನ್ಯಾಯಾಲಯದ ಆದೇಶವಿದ್ದರೆ ಸಂಬoಧಿಸಿದ ದೇವಾಲಯಗಳಿಗೆ ಅಧಿಕಾರಿಗಳು ನೋಟಿಸ್ ನೀಡಬೇಕಾಗಿತ್ತು. ಆದರೆ ಏಕಾಏಕಿ ದೇವಾಲಯಗಳನ್ನು ತೆರವುಗೊಳಿಸಲಾಗಿದೆ. ಅಧಿಕಾರಿಗಳು ಜನರ ಭಾವನೆಗಳಿಗೆ ಸ್ಪಂದಿಸಬೇಕೆ ಹೊರತು ಜನಪ್ರತಿನಿಧಿಗಳ ಮಾತಿನಂತೆ ನಡೆದುಕೊಳ್ಳಬಾರದೆಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ದುರ್ಗಾವಾಹಿನಿಯ ಅಂಬಿಕಾ ಉತ್ತಪ್ಪ ತೆರವುಗೊಳಿಸಲಾಗಿರುವ ದೇವಾಲಯಗಳ ಪುನರ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ವಕೀಲ ಟಿ.ಪಿ.ಕೃಷ್ಣ ಮಾತನಾಡಿ ವಿರಾಜಪೇಟೆಯ ಅಧಿಕಾರಿಗಳು ಪುರಾತನ ಕಾಲದ ಎರಡು ದೇವಸ್ಥಾನಗಳ ಸರ್ವೆ ಕಾರ್ಯ ನಡೆಸಿರುವುದು ತಿಳಿದು ಬಂದಿದೆ. ತಕ್ಷಣ ಸರ್ವೆಕಾರ್ಯ ಕೈಬಿಡಬೇಕು ಎಂದರು.
ಪ್ರತಿಭಟನೆಯಲ್ಲಿ ಸಂಘಟನೆಯ ಮಡಿಕೇರಿ ತಾಲೂಕು ಅಧ್ಯಕ್ಷ ಸುರೇಶ್ ಮುತ್ತಪ್ಪ, ಬಜರಂಗದಳ ತಾಲೂಕು ಸಂಯೋಜಕ ವಿವೇಕ್ ರೈ, ಕುಟುಂ ಪ್ರಭೋದನ್ ಟಿ.ಪಿ.ಚಂದ್ರನ್, ಜಿಲ್ಲಾ ಸಂಪರ್ಕ ಪ್ರಮುಖ್ ಪ್ರಿನ್ಸ್ ಗಣಪತಿ, ಬಿ.ವಿ ಹೇಮಂತ್ ಕಿಶನ್, ತಾಲೂಕು ಕಾರ್ಯದರ್ಶಿ ಬಿ.ಎಂ. ಕುಮಾರ್ ಸೇರಿದಂತೆ ವಿಶ್ವ ಹಿಂದೂ ಪರಿಷತ್, ಬಜರಂಗದಳದ ಪದಾಧಿಕಾರಿಗಳು ಭಾಗವಹಿಸಿದ್ದರು.
ಉಪ ತಹಶೀಲ್ದಾರ್ ಹೆಚ್.ಬಿ.ಪ್ರದೀಪ್ ಕುಮಾರ್ ಮನವಿ ಸ್ವೀಕರಿಸಿದರು.