ಪಂಜಾಬ್‌ನ ನೂತನ ಮುಖ್ಯಮಂತ್ರಿ ಚರಣ್‍ಜೀತ್ ಸಿಂಗ್

20/09/2021

ಚಂಡಿಗಢ, ಸೆ.19: ಅಮರೀಂದರ್ ಸಿಂಗ್ ರಾಜೀನಾಮೆ ನೀಡಿದ ಬಳಿಕ ಅಚ್ಚರಿಯ ರಾಜಕೀಯ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್ ಹೈಕಮಾಂಡ್, ದಲಿತ ಸಿಖ್ ಸಮುದಾಯದ ನಾಯಕ ಚರಣ್‌ಜಿತ್ ಸಿಂಗ್ ಚನ್ನಿ ಅವರನ್ನು ಪಂಜಾಬ್‌ನ ನೂತನ ಮುಖ್ಯಮಂತ್ರಿಯಾಗಿ ರವಿವಾರ ಘೋಷಿಸಿದೆ.

ಕಳೆದ ಕೆಲವು ತಿಂಗಳುಗಳಿಂದ ಪಂಜಾಬ್ ಕಾಂಗ್ರೆಸ್ ನಲ್ಲಿ ಭುಗಿಲೆದ್ದಿದ್ದ ಅಂತಃಕಲಹದ ಬಳಿಕ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ ಅಮರೀಂದರ್ ಸಿಂಗ್ ಅವರ ಉತ್ತರಾಧಿಕಾರಿಯಾಗಿದ್ದಾರೆ.

“ಪಂಜಾಬ್‌ನ ಕಾಂಗ್ರೆಸ್ ಶಾಸಕಾಂಗ ಪಕದ ನೂತನ ನಾಯಕರಾಗಿ ಚರಣ್‌ಜಿತ್‌ಸಿಂಗ್ ಚನ್ನಿ ಅವರನ್ನು ಅವಿರೋಧ ವಾಗಿ ಆಯ್ಕೆ ಮಾಡಲಾಗಿದೆ ಎಂದು ಘೋಷಿಸಲು ನನಗೆ ಅಪಾರ ಸಂತಸವಾಗುತ್ತಿದೆ’ ಎಂದು ಪಂಜಾಬ್ ಕಾಂಗ್ರೆಸ್ ಉಸ್ತುವಾರಿ ಹರೀಶ್ ರಾವತ್‌ ಟೀಟಿಸಿದ್ದಾರೆ.

58 ವರ್ಷ ವಯಸ್ಸಿನ ಚನ್ನಿ ಅವರು ಹಿಂದಿನ ಕ್ಯಾ ಅಮರೀಂದರ್ ಸಿಂಗ್ ನೇತೃತ್ವದ ಸರಕಾರದಲ್ಲಿ ತಾಂತ್ರಿಕ ಶಿಕ್ಷಣ ಸಚಿವರಾಗಿದ್ದರು. ಅಮರೀಂದರ್ ಸಿಂಗ್ ವಿರುದ್ಧ ಬಂಡಾಯದ ಕಹಳೆ ಮೊಳಗಿಸಿದ ಕಾಂಗ್ರೆಸ್ ನಾಯಕರಲ್ಲಿ ಚನ್ನಿ ಕೂಡಾ ಒಬ್ಬರಾಗಿದ್ದರು.2017ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸುವಲ್ಲಿ ಅಮರೀಂದರ್ ಸಿಂಗ್ ವಿಫಲರಾಗಿದ್ದರೆಂದು ಅವರು ಟೀಕಿಸಿದ್ದರು.

ಭಿನ್ನಮತದಿಂದ ಜರ್ಜರಿತವಾಗಿರುವ ಕಾಂಗ್ರೆಸ್ ಪಕ್ಷವು ಮುಂದಿನ ಐದು ತಿಂಗಳೊಳಗೆ ಪಂಜಾಬ್ ವಿಧಾನಸಭೆಗೆ ಚುನಾವಣೆಯನ್ನು ಎದುರಿಸಲಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯಾಗಿ ಚನ್ನಿ ಅವರ ಆಯ್ಕೆಯು ಹೆಚ್ಚಿನ ಮಹತ್ವ ಪಡೆದಿದೆ.

ಪಂಜಾಬ್‌ನಲ್ಲಿ ಒಂದು ವೇಳೆ ತಾನು ಅಧಿಕಾರಕ್ಕೆ ಬಂದಲ್ಲಿ, ದಲಿತ ಮುಖ್ಯಮಂತ್ರಿಯನ್ನು ನೇಮಿಸುವುದಾಗಿ ಬಿಜೆಪಿ ಈ ಮೊದಲು ಘೋಷಿಸಿತ್ತು.