ಹೊಯ್ಸಳ ಶೈಲಿಯ ದೇವಾಲಯಗಳ ಪಟ್ಟಿಗೆ ಸೇರುವ ಕೈದಾಳ

21/09/2021

ಕೈದಾಳ ಗ್ರಾಮವು ತುಮಕೂರಿನಿಂದ ಸುಮಾರು 7 ಕಿ.ಮೀ ದೂರದಲ್ಲಿದೆ. ಇಲ್ಲಿ ಬಹಳ ಸುಂದರವಾದ ಹೊಯ್ಸಳ ಶೈಲಿಯ ಚನ್ನಕೇಶವ ದೇವಾಲಯವಿದೆ. ತುಮಕೂರಿನಿಂದ ಕುಣಿಗಲ್ ಕಡೆಗೆ ಹೋಗುವ ರಸ್ತೆಯಲ್ಲಿ ಸುಮಾರು 6 ಕಿ.ಮೀ ಚಲಿಸಿದರೆ ಗಣೇಶನಿಗೆ ಪ್ರಸಿದ್ದವಾದ ಗೂಳೂರು ಸಿಗುತ್ತದೆ. ಗೂಳೂರಿನಿಂದ ಬಲಕ್ಕೆ ತಿರುಗಿ 1 ಕಿ.ಮೀ ಚಲಿಸಿದರೆ ಕೈದಾಳ ತಲುಪಬಹುದು. ತುಮಕೂರು ಜಿಲ್ಲೆಯಲ್ಲಿನ ಕೈದಾಳ, ಈ ಹೊಯ್ಸಳ ಶೈಲಿಯ ದೇವಾಲಯಗಳ ಪಟ್ಟಿಗೆ ಸೇರುವ ಮತ್ತೊಂದು ಹಳ್ಳಿ. ತುಮಕೂರು-ಕುಣಿಗಲ್ ರಸ್ತೆಯಲ್ಲಿ ಸಿಗುವ ಗೂಳೂರಿನಲ್ಲಿ ಬಲಕ್ಕೆ ತಿರುಗಿ ಒಂದು ಕಿ.ಮೀ. ಚಲಿಸಿದರೆ ಕೈದಾಳ ಸಿಗುತ್ತದೆ.

ಹೊಯ್ಸಳ ಶೈಲಿಯ ಶಿಲಾಬಾಲಿಕೆ-ಕೆತ್ತನೆಗಳನ್ನು ಹುಡುಕಿ ಇಲ್ಲಿಗೆ ಬಂದರೆ ನಿರಾಶೆ ಖಂಡಿತ. ಹೊರಗಿನಿಂದ ಸಾಧಾರಣ ದೇಗುಲದಂತೆ ಕಂಡರೂ, ಗರ್ಭಗುಡಿಯಲ್ಲಿರುವ ಚನ್ನಕೇಶವ ವಿಗ್ರಹದ ಕೆತ್ತನೆ ಕಣ್ಸೆಳೆಯುತ್ತದೆ. ಸುಮಾರು 6 ಅಡಿ ಎತ್ತರವಿರುವ ಕಪ್ಪು ಶಿಲೆಯ ಚನ್ನಕೇಶವ ಸ್ವಾಮಿ ಎಲ್ಲ ದೇವಾಲಯಗಳಂತೆ ಪೂರ್ವಾಭಿಮುಖವಾಗಿರುವ ಬದಲು, ಇಲ್ಲಿ ಪಶ್ಚಿಮಾಭಿಮುಖವಾಗಿದೆ. ಪ್ರಭಾವಳಿಯಲ್ಲಿ ವಿಷ್ಣುವಿನ ದಶಾವತಾರದ ಕೆತ್ತನೆ ಶಿಲ್ಪಿಯ ಕರಕುಶಲತೆಯನ್ನು ಎತ್ತಿ ತೋರುತ್ತದೆ.

ಪುರಾಣ, ದಂತಕಥೆಗಳ ಪ್ರಕಾರ ಕೈದಾಳ (ಮೊದಲಿಗೆ ಕ್ರೀಡಿಕಾಪುರ) ಜಕಣಾಚಾರಿ ಹುಟ್ಟಿದ ಸ್ಥಳ. ತಾನು ಕೆತ್ತಿದ ಬೇಲೂರಿನ ಚನ್ನಕೇಶವ (ಕಪ್ಪೆ ಚನ್ನಿಗರಾಯ) ವಿಗ್ರಹದಲ್ಲಿನ ದೋಷಕ್ಕಾಗಿ ತನ್ನ ಕೈಯನ್ನು ಬಲಿ ಕೊಟ್ಟ ಜಕಣಾಚಾರಿ, ದೈವೇಚ್ಛೆಯಂತೆ ತನ್ನ ಹುಟ್ಟೂರಿನಲ್ಲಿ ಮತ್ತೊಂದು ದೇವಸ್ಥಾನ ನಿರ್ಮಿಸಿ ಕೈ ಮರಳಿ ಪಡೆಯುತ್ತಾನೆ. ಕೈ ಮರಳಿ ಬಂದಿದ್ದರಿಂದ ಕ್ರೀಡಿಕಾಪುರ ಮುಂದೆ ಕೈದಾಳವಾಗಿ ಮಾರ್ಪಟ್ಟಿತು ಎನ್ನಲಾಗುತ್ತದೆ. ಜಕಣಾಚಾರಿಯ ಜೀವನದ ಕೊನೆಯ ದಿನಗಳಲ್ಲಿ ಕೈದಾಳದ ದೇವಾಲಯವನ್ನು ಕಟ್ಟಲಾಯಿತೆಂದೂ, ಅದರಿಂದಾಗಿ ದೇವಸ್ಥಾನದ ಹೊರಗಿನ ಕೆತ್ತನೆ ನಡೆಯಲಿಲ್ಲವೆಂದು ಪ್ರತೀತಿ. ಒಂದು ದಂತಕಥೆ ಈ ರೀತಿಯದ್ದಾರೆ, ಕೆಲವರ ತರ್ಕದ ಪ್ರಕಾರ, ಜಕಣಾಚಾರಿ ಎನ್ನುವ ಶಿಲ್ಪಿ ಬದುಕಿರಲೇ ಇಲ್ಲ ಎನ್ನುವುದು.