ಕೊಡಗಿನ ಚೆಕ್ ಪೋಸ್ಟ್ ಗಳಿಗೆ ದಕ್ಷಿಣ ವಲಯದ ಐ.ಜಿ.ಪಿ. ಭೇಟಿ : 24 ಗಂಟೆಯೂ ನಿಗಾ ವಹಿಸಲು ಸೂಚನೆ

21/09/2021

ಮಡಿಕೇರಿ ಸೆ.21 : ಕೊಡಗು-ಕೇರಳ ಗಡಿ ಪ್ರದೇಶದ ಮಾಕುಟ್ಟ ಹಾಗೂ ಕುಟ್ಟದ ಕೋವಿಡ್-19 ಚೆಕ್ ಪೋಸ್ಟ್ ಗಳಿಗೆ ದಕ್ಷಿಣ ವಲಯ ಪೊಲೀಸ್ ಮಹಾ ನಿರೀಕ್ಷಕ ಪ್ರವೀಣ್ ಮಧುಕರ್ ಪವಾರ್ ಭೇಟಿ ನೀಡಿದರು.NEWS DESK
ಚೆಕ್ ಪೋಸ್ಟ್ ಪರಿಶೀಲನೆ ನಡೆಸಿದ ಅವರು ಕರ್ತವ್ಯದಲ್ಲಿದ್ದ ಅಧಿಕಾರಿಗಳಿಂದ ತಪಾಸಣಾ ಕಾರ್ಯದ ಬಗ್ಗೆ ಮಾಹಿತಿ ಪಡೆದರು. ನೆರೆಯ ಕೇರಳ ರಾಜ್ಯದಲ್ಲಿ ಕೋವಿಡ್ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪ್ರಮುಖ ಕೊಡಗು-ಕೇರಳ ಗಡಿಪ್ರದೇಶಗಳಾದ ಮಾಕುಟ್ಟ, ಕುಟ್ಟ ಮತ್ತು ಕರಿಕೆ ಗೇಟ್ ಗಳಲ್ಲಿ ಕೋವಿಡ್ ತಪಾಸಣಾ ಕೇಂದ್ರಗಳನ್ನು ತೆರೆಯಲಾಗಿದೆ. ಅಧಿಕಾರಿಗಳು ತೀವ್ರ ನಿಗಾ ವಹಿಸಬೇಕೆಂದು ಸೂಚನೆ ನೀಡಿದರು.NEWS DESK
ತಪಾಸಣಾ ಕೇಂದ್ರದಲ್ಲಿ ದಿನದ 24 ಗಂಟೆಯೂ ಪೊಲೀಸ್, ಕಂದಾಯ ಮತ್ತು ಆರೋಗ್ಯ ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯನಿರ್ವಹಿಸಬೇಕು. ಎಲ್ಲಾ ವಾಹನಗಳು ಹಾಗೂ ಸಾರ್ವಜನಿಕರನ್ನು ತಪಾಸಣೆ ಮಾಡಿ ದಾಖಲೆಗಳನ್ನು ಪರಿಶೀಲಿಸಿ ಸರ್ಕಾರಿ ಮಾರ್ಗಸೂಚಿಯಂತೆ ಕ್ರಮ ಕೈಗೊಳ್ಳುವಂತೆ ಪ್ರವೀಣ್ ಮಧುಕರ್ ಪವಾರ್ ತಿಳಿಸಿದರು.NEWS DESK
ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಈ ಸಂದರ್ಭ ಹಾಜರಿದ್ದರು.