ದೇವರಚಿಕ್ಕನಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ದುರಂತ: ತಾಯಿ, ಮಗಳು ಸಜೀವ ದಹನ

22/09/2021

ಬೆಂಗಳೂರು: ಬೊಮ್ಮನಹಳ್ಳಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ದೇವರಚಿಕ್ಕನಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ಮಂಗಳವಾರ ಸಂಜೆ ಸಂಭವಿಸಿದ ಅಗ್ನಿ ಅನಾಹುತದಲ್ಲಿ ತಾಯಿ, ಮಗಳು ಸಜೀವ ದಹನವಾಗಿದ್ದಾರೆ. ದುರ್ಘಟನೆಯಲ್ಲಿ ಒಬ್ಬರಿಗೆ ಸುಟ್ಟ ಗಾಯಗಳಾಗಿವೆ.

ಲಕ್ಷ್ಮಿದೇವಿ (82) ಮತ್ತು ಅವರ ಮಗಳು ಭಾಗ್ಯರೇಖಾ (56) ಮೃತಪಟ್ಟವರು. ‘ಆಶ್ರಿತಾ ಆಸ್ಪೈರ್‌’ ಎಂಬ ಅಪಾರ್ಟ್‌ಮೆಂಟ್‌ನಲ್ಲಿ ಘಟನೆ ಸಂಭವಿಸಿದೆ. ಅನಾಹುತಕ್ಕೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಗ್ಯಾಸ್‌ ಸಿಲಿಂಡರ್‌ ಸೋರಿಕೆ ಅಥವಾ ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ನಿಂದ ಅನಾಹುತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.

ಮೃತ ಭಾಗ್ಯರೇಖಾ ಹಾಗೂ ಅವರ ಪತಿ ಭೀಮಸೇನರಾವ್‌ ಅವರು ಆಶ್ರಿತಾ ಆಸ್ಪೈರ್‌ ಅಪಾರ್ಟ್‌ಮೆಂಟ್‌ನ 2ನೇ ಮಹಡಿಯಲ್ಲಿ 210 ಸಂಖ್ಯೆಯ ಫ್ಲ್ಯಾಟ್‌ ಹೊಂದಿದ್ದಾರೆ. ಭಾಗ್ಯರೇಖಾ ಹಾಗೂ ಭೀಮಸೇನರಾವ್‌ ಅವರು ಆರು ತಿಂಗಳಿನಿಂದ ಅಮೆರಿಕದಲ್ಲಿ ಇದ್ದರು. ಸೋಮವಾರವಷ್ಟೇ ಬೆಂಗಳೂರಿಗೆ ಆಗಮಿಸಿದ್ದರು. ಪಕ್ಕದಲ್ಲೇ ಇರುವ 211ನೇ ಫ್ಲ್ಯಾಟ್‌ನಲ್ಲಿ ಮಗಳ ಮನೆ ಇದೆ. ಅಲ್ಲಿಉಳಿದುಕೊಂಡಿದ್ದರು. ಪಕ್ಕದಲ್ಲೇ ಇರುವ 210ನೇ ಫ್ಲ್ಯಾಟ್‌ ಆರು ತಿಂಗಳಿನಿಂದ ಖಾಲಿ ಇದ್ದ ಕಾರಣಕ್ಕೆ ಸ್ವಚ್ಛಗೊಳಿಸಲು ತಾಯಿ ಲಕ್ಷ್ಮಿದೇವಿ ಅವರೊಂದಿಗೆ ಭಾಗ್ಯರೇಖಾ ಹೋಗಿದ್ದರು.

ಈ ವೇಳೆ ಭೀಮಸೇನರಾವ್‌ ಮಗಳ ಮನೆಯಲ್ಲಿಮಲಗಿದ್ದರು. ತಾಯಿ ಮತ್ತು ಮಗಳು ಮನೆ ಶುಚಿಗೊಳಿಸುವ ಸಂದರ್ಭದಲ್ಲಿಸಂಜೆ 4.15ಕ್ಕೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಇಬ್ಬರು ಬಾಲ್ಕಾನಿಗೆ ಓಡಿ ಬಂದು ರಕ್ಷಣೆಗಾಗಿ ಪಕ್ಕದ ಮತ್ತೊಂದು ಫ್ಲ್ಯಾಟ್‌ನಲ್ಲಿಮಲಗಿದ್ದ ಪತಿಗೆ ಪೋನ್‌ ಮಾಡಿದ್ದಾರೆ. ಅಷ್ಟರೊಳಗೆ ಬೆಂಕಿ ಜೋರಾಗಿ ಎರಡೂ ಫ್ಲ್ಯಾಟ್‌ಗಳಿಗೆ ಕೆನ್ನಾಲಗೆ ಚಾಚಿದೆ. ಬಾಲ್ಕನಿಯಲ್ಲೇ ಬೆಂಕಿಯ ನಡುವೆ ಸಿಲುಕಿಕೊಂಡಿದ್ದ ಪತ್ನಿ ಹಾಗೂ ಅತ್ತೆ ಅವರನ್ನು ರಕ್ಷಿಸಲು ಭೀಮಸೇನರಾವ್‌ ಅವರು ಪ್ರಯತ್ನ ನಡೆಸಿದ್ದಾರೆ.

ಬೆಂಕಿ ಜೋರಾಗಿದ್ದರಿಂದ ಅದು ಸಾಧ್ಯವಾಗಿಲ್ಲ. ಅಮ್ಮ ಹಾಗೂ ಮಗಳು ಇಬ್ಬರು ಫ್ಲ್ಯಾಟ್‌ನ ಬಾಲ್ಕನಿಯಲ್ಲಿಸಿಲುಕಿ ರಕ್ಷಣೆಗಾಗಿ ಕೂಗಿಕೊಂಡಿದ್ದಾರೆ. ಆದರೆ ಬೆಂಕಿ ಮತ್ತಷ್ಟು ಜೋರಾಗಿದ್ದರಿಂದ ಮತ್ತು ಬಾಲ್ಕನಿಗೆ ಗ್ರಿಲ್‌ ಹಾಕಿದ್ದರಿಂದ ಯಾರೂ ರಕ್ಷಣೆಗೆ ಧಾವಿಸಲು ಸಾಧ್ಯವಾಗಲಿಲ್ಲ. ಇಬ್ಬರು ಅಲ್ಲೇ ಸಜೀವ ದಹನವಾಗಿದ್ದಾರೆ. ಭೀಮಸೇನರಾವ್‌ ತಲೆ ಭಾಗಕ್ಕೆ ಸಣ್ಣಪುಟ್ಟ ಸುಟ್ಟ ಗಾಯಗಳಾಗಿವೆ.