ನಾಪೋಕ್ಲುವಿನಲ್ಲಿ ಅಪ್ಪಚ್ಚ ಕವಿಯ 153ನೇ ಜನ್ಮದಿನಾರಣೆ  

22/09/2021

ಮಡಿಕೇರಿ ಸೆ. 22 : ಕೊಡಗಿನ ಆಧಿಕವಿ, ಶ್ರೇಷ್ಠ ಕವಿ ಎಂದು ಖ್ಯಾತಿ ಪಡೆದಿರುವ ಕೊಡವ ಸಾಹಿತ್ಯಾಭಿವೃದ್ಧಿಗೆ ಶ್ರಮಿಸಿದ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ ಅವರ ಐನ್‍ಮನೆಯನ್ನು ಸ್ಮಾರಕವನ್ನಾಗಿಸುವುದರೊಂದಿಗೆ ಆ ಗ್ರಾಮವನ್ನು ಅಭಿವೃದ್ಧಿಪಡಿಸಬೇಕು ಎಂದು ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಒತ್ತಾಯಿಸಿದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ನಾಪೊಕ್ಲು ಕೊಡವ ಸಮಾಜದ ಸಂಯುಕ್ತ ಆಶ್ರಯದಲ್ಲಿ ನಾಪೋಕ್ಲು ಕೊಡವ ಸಮಾಜ ಅಪ್ಪಚ್ಚ ಕವಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಅಪ್ಪಚ್ಚ ಕವಿಯ 153ನೇ ಹುಟ್ಟುಕಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾಡಿದರು.
ಸರ್ಕಾರ ಸಾಹಿತಿ, ಕವಿಗಳು ಹುಟ್ಟಿ ಬೆಳೆದ ಮನೆ, ಗ್ರಾಮವನ್ನು ಅಭಿವೃದ್ಧಿಪಡಿಸಿ ಸಾಹಿತ್ಯ ಲೋಕಕ್ಕೆ ನೀಡಿದ ಕೊಡಗೆ, ಸೇವೆಯನ್ನು ಉಳಿಸುವ ಮತ್ತು ಪ್ರದರ್ಶಿಸುವ ಕಾರ್ಯ ಮಾಡುತ್ತಿದೆ. ಅದೇ ರೀತಿ ಅಪ್ಪಚ್ಚ ಕವಿಯ ಸಾಧನೆಯನ್ನು ಹೊರ ಜಗತ್ತಿಗೆ, ಯುವ ಪೀಳಿಗೆಗೆ ಪರಿಚಯಿಸುವ ಕೆಲಸವಾಗಬೇಕಿದೆ ಎಂದರು.
ಅಪ್ಪಚ್ಚ ಕವಿಯ ಬಗ್ಗೆ ವಿಚಾರ ಮಂಡನೆ ಮಾಡಿದ ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ, ಅಪ್ಪಚ್ಚಕವಿ ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆ, ಶ್ರಮ, ಕಷ್ಟ, ನಷ್ಟ ಯುವ ಪೀಳಿಗೆಗೆ ತಿಳಿಸುವ ಅಗತ್ಯವಿದೆ. ಅದಕ್ಕಾಗಿ ಅವರ ಐನ್‍ಮನೆ ಮತ್ತು ಅವರ ಗ್ರಾಮವನ್ನು ಸರಕಾರ ಅಭಿವೃದ್ಧಿಪಡಿಸಲು ಕ್ರಮಕೈಗೊಳ್ಳಬೇಕು. ಅಲ್ಲದೇ ಅವರಿಗೆ ಕರ್ನಾಟಕ ಬಿರುದು ನೀಡಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಅಪ್ಪನೆರವಂಡ ಐನ್‍ಮನೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಪ್ಪನೆರವಂಡ ಚುಮ್ಮಿ ದೇವಯ್ಯ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಅಪ್ಪನೆರವಂಡ ರಾಮು, ಡಾ. ಮನೋಜ್ ಹಾಜರಿದ್ದರು.
ಕಾರ್ಯಕ್ರಮದ ಅಂಗವಾಗಿ ಬೇತು ಗ್ರಾಮದ ಮಹಿಳಾ ಉಮ್ಮತಾಟ್ ತಂಡದಿಂದ ಉಮ್ಮತಾಟ್, ಚೆಕ್ಕೆರ ಪಂಚಮ್ ತ್ಯಾಗರಾಜ್ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ಜಾನಪದ ತಜ್ಞ ಬೊಟ್ಟೋಳಂಡ ಕಾಶಿ ಅಚ್ಚಯ್ಯ ಅಪ್ಪಚ್ಚ ಕವಿ ರಚಿಸಿದ ಹಾಡು ಹಾಡುವುದರ ಮೂಲಕ ರಂಜಿಸಿದರು. ಬಟ್ಟೀರ ಡಯಾನ ಸಂಜೂ ಪ್ರಾರ್ಥಿಸಿ, ಅಕಾಡೆಮಿ ರಿಜಿಸ್ಟ್ರಾರ್ ಅಜ್ಜಿಕುಟ್ಟಿರ ಗಿರೀಶ್ ಸ್ವಾಗತಿಸಿ, ಅಕಾಡೆಮಿ ಸಂಚಾಲಕ ತೇಲಪಂಡ ಕವನ್ ಕಾರ್ಯಪ್ಪ ಮತ್ತು ಬಾಳೆಯಡ ದಿವ್ಯಾ ಮಂದಪ್ಪ ನಿರೂಪಿಸಿದರು. ನಾಪೋಕ್ಲು ಕೊಡವ ಸಮಾಜದ ಗೌರವ ಕಾರ್ಯದರ್ಶಿ ಕಲ್ಲೇಟಿರ ಅಜಿತ್ ನಾಣಯ್ಯ ವಂದಿಸಿದರು.