ಕೋರ್ಟ್ ತೀರ್ಪಿಗೆ ಅಖಿಲ ಕೊಡವ ಸಮಾಜ ಹರ್ಷ

22/09/2021

ಮಡಿಕೇರಿ ಸೆ.22 : ಕೊಡವರು ಹಾಗೂ ಜಮ್ಮ ಹಿಡುವಳಿದಾರರ ಕೋವಿ ಹಕ್ಕನ್ನು ಪ್ರಶ್ನಿಸಿ ಕ್ಯಾಫ್ಟನ್ ಚೇತನ್ ಹೈಕೋರ್ಟ್’ನಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿ ಕೋವಿ ಹಕ್ಕನ್ನು ಯಥಾಸ್ಥಿತಿಯಲ್ಲಿ ಕಾಯ್ದಿರಿಸುವಂತೆ ಆದೇಶ ನೀಡಿರುವುದು  ನ್ಯಾಯಯುತವಾಗಿದೆ ಎಂದು ಅಖಿಲ ಕೊಡವ ಸಮಾಜ ಹಾಗೂ ಅದರ ಅಂಗ ಸಂಸ್ಥೆಗಳು ಹರ್ಷ ವ್ಯಕ್ತಪಡಿಸಿವೆ.
 ಅಖಿಲ ಕೊಡವ ಸಮಾಜ ಅಧ್ಯಕ್ಷ ಮಾತಂಡ ಮೊಣ್ಣಪ್ಪ, ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಬಾಚರಣಿಯಂಡ ರಾಣು ಅಪ್ಪಣ್ಣ ಹಾಗೂ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಹೈಕೋರ್ಟ್ ಆದೇಶವನ್ನು ಸ್ವಾಗತಿಸಿದ್ದಾರೆ. ಸಾಂವಿಧಾನಿಕ ಹಾಗೂ ಸೈನಿಕ ಪರಂಪರೆಯ ಮಹತ್ವ ಉಳ್ಳ ಈ ಕಾನೂನು ಹೋರಾಟದಲ್ಲಿ ಭಾಗಿಯಾದ ಎಲ್ಲಾ ವಕೀಲ ಮಿತ್ರರನ್ನು ಹಾಗೂ ಸಂಘ ಸಂಸ್ಥೆಗಳನ್ನು ಅಭಿನಂದಿಸುವುದಾಗಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
  ಅರ್ಜಿದಾರರು ಇನ್ನಾದರು ಇಂತಹ ವಿಚಾರದಲ್ಲಿ ತಗಾದೆ ತೆಗೆದು ಜನರ ಭಾವನೆಯೊಂದಿಗೆ ಆಟವಾಡದಿರುವುದು ಉತ್ತಮ. ಈಗಾಗಲೇ ಅರ್ಜಿದಾರರಿಗೆ ಎರಡು ಬಾರಿ ಮುಖಭಂಗವಾಗಿದೆ. ಕೊಡವರ ಹಾಗೂ ಜಮ್ಮ ಹಿಡುವಳಿದಾರರ ಕೋವಿ ಹಕ್ಕು ಇಂದು ನಿನ್ನೆಯದಲ್ಲ. ಇದು ಸ್ವಾತಂತ್ರ್ಯ ಪೂರ್ವದ್ದಾಗಿದೆ ಮತ್ತು ಸಾಂವಿಧಾನಿಕವಾಗಿದೆ. ಈ ಹಕ್ಕನ್ನು ಎಲ್ಲಿಯೂ ದುರ್ಬಳಕೆ ಮಾಡಿಕೊಂಡ ಪ್ರಕರಣಗಳೇ ಇಲ್ಲ, ದೇಶದಲ್ಲಿ ತುರ್ತು ಪರಿಸ್ಥಿತಿಯಂತಹ ಸಂದರ್ಭದಲ್ಲಿ ಕೂಡ ಕೊಡವರ ಕೋವಿಗಳು ದೇವರ ಸ್ಥಾನದಲ್ಲಿಯೇ ಪೂಜಿಸಲ್ಪಡುತಿತ್ತು ಹೊರತು ಬೀದಿಗೆ ಇಳಿದಿಲ್ಲ.
ಆದರೆ ಇದನ್ನು ಸಾರ್ವಜನಿಕವಾಗಿ ಬೀದಿಗೆ ತರುವಂತಹ ಹಾಗೂ ಕೋರ್ಟ್ ಮೆಟ್ಟಿಲು ಹತ್ತುವಂತಹ ಕೆಲಸ ಮಾಡಿರುವುದು ಖಂಡನೀಯ. ಇಲ್ಲಿನ ಜನರ ಮನೆಯ ಒಬ್ಬ ಸದಸ್ಯನ ಸ್ಥಾನ ಪಡೆದಿರುವ ಕೋವಿ ನೆಲ್ಲಕ್ಕಿ ನಡುಬಾಡೆಯಲ್ಲಿ ಪೂಜಿಸಲ್ಪಡುತ್ತದೆ. ಕೋವಿಯ ಮಹತ್ವವನ್ನು ಅರಿತ್ತಿರುವ ವ್ಯಕ್ತಿಯೇ ತಗಾದೆ ತೆಗೆದಿರುವುದು ಸರಿಯಲ್ಲ, ನಿಮಗೆ ಏನು ಬೇಕು ಅದನ್ನು ಕೇಳುವ ಹಕ್ಕು ನಿಮಗಿದೆ, ಆದರೆ ಇನ್ನೊಬ್ಬರ ಹಕ್ಕನ್ನು ಕಸಿದುಕೊಳ್ಳಲು ನೋಡುವುದು ಸ್ವಾರ್ಥಕ್ಕೆ ಸಮ ಎಂದು ಪ್ರಮುಖರು ಅಭಿಪ್ರಾಯಪಟ್ಟಿದ್ದಾರೆ.
 ಜನಾಂಗ ಜನಾಂಗದ ನಡುವೆ ವಿಷಬೀಜ ಬಿತ್ತುವುದು ಬಿಟ್ಟು ಅರ್ಜಿದಾರರು ಬದಲಾಗುವುದು ಒಳಿತು ಎಂದು ತಿಳಿಸಿದ್ದಾರೆ.