ಕೋವಿ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ : ಎನ್.ಯು.ನಾಚಪ್ಪ ಪ್ರತಿಪಾದನೆ

22/09/2021

ಮಡಿಕೇರಿ ಸೆ.22 : ಕೊಡವರ ಸಂಸ್ಕೃತಿಯ ಪ್ರತೀಕವಾಗಿರುವ, ಪೂಜ್ಯ ಭಾವನೆಯ ಕೋವಿಯ ಹಕ್ಕನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲವೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಪ್ರತಿಪಾದಿಸಿದ್ದಾರೆ.
ಕೋವಿ ಹಕ್ಕು ಮುಂದುವರೆಯಲಿದೆ ಎಂದು ಹೈಕೋರ್ಟ್ ನೀಡಿದ ತೀರ್ಪಿನ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಅವರು ನಮ್ಮ ಹಕ್ಕಿಗಾಗಿ ನಾವು ನಿರಂತರವಾಗಿ ಹೋರಾಟ ನಡೆಸುತ್ತಲೇ ಬಂದಿದ್ದೇವೆ. ಪ್ರತಿಯೊಬ್ಬರು ತಮ್ಮ ಹಕ್ಕಿಗಾಗಿ ಹೋರಾಟ ನಡೆಸಲು ಸಂವಿಧಾನದಲ್ಲಿ ಅವಕಾಶವಿದೆ. ಆ ಪ್ರಕಾರವಾಗಿ ಕೊಡವರ ಹಕ್ಕಿಗೆ ಜಯ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಹಕ್ಕನ್ನು ಕಸಿದುಕೊಳ್ಳುವ ಸಂದರ್ಭದಲ್ಲಿ ಕಾನೂನಾತ್ಮಕ ಚೌಕಟ್ಟಿನಡಿ ಹೋರಾಟ ಮನೋಭಾವವನ್ನು ತೋರಬೇಕಾಗುತ್ತದೆ. ಸಿಎನ್‌ಸಿ ಸಂಘಟನೆ ಅನೇಕ ವರ್ಷಗಳಿಂದ ಕೊಡವರ ಹಕ್ಕುಗಳನ್ನು ಉಳಿಸಿಕೊಳ್ಳುವುದಕ್ಕಾಗಿ ಹೋರಾಟಗಳನ್ನು ನಡೆಸಿಕೊಂಡು ಬಂದಿದೆ. ಕೊಡವರು ಕೋವಿ ಹಕ್ಕನ್ನು ಹೊಂದುವ ಅರ್ಹತೆಯ ಬಗ್ಗೆ ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಪ್ರತಿಪಾದಿಸುತ್ತಲೇ ಬರಲಾಗಿದೆ. ಅಲ್ಲದೆ “ತೋಕ್ ನಮ್ಮೆ” ಆಚರಿಸುವ ಮೂಲಕ ಕೋವಿ ಹಕ್ಕಿನ ಬಗ್ಗೆ ಕೊಡವರಲ್ಲಿ ಜಾಗೃತಿಯನ್ನು ಮೂಡಿಸಲಾಗಿದೆ. ಕೊಡವರ ಹಕ್ಕಿನ ಪರ ಸಿಎನ್‌ಸಿ ಹೋರಾಟ ನಿರಂತರವೆoದು ನಾಚಪ್ಪ ಹೇಳಿದರು.