ರಾಷ್ಟ್ರೀಯ ಶಿಕ್ಷಣ ನೀತಿ ಸಂಬಂಧ ಮುಕ್ತ ಚರ್ಚೆಗೆ ಸರ್ಕಾರ ಸಿದ್ಧ: ಸಿಎಂ ಬೊಮ್ಮಾಯಿ

24/09/2021

ಬೆಂಗಳೂರು: ‘ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಸಂಬಂಧಿಸಿದಂತೆ ಮುಕ್ತ ಚರ್ಚೆಗೆ ಸರ್ಕಾರ ಸಿದ್ಧವಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಎನ್ಇಪಿ ಕುರಿತು ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ಸಿನ ಬಿ.ಕೆ. ಹರಿಪ್ರಸಾದ್ ಪ್ರಸ್ತಾಪಿಸಿದ ವಿಷಯದಲ್ಲಿ ನಡೆದ ಚರ್ಚೆಗೆ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಉತ್ತರಿಸುವ ವೇಳೆ ಮಾತನಾಡಿದ ಮುಖ್ಯಮಂತ್ರಿಗಳು, ‘ಹಳ್ಳಿಯ ವಿದ್ಯಾರ್ಥಿ ಜಾಗತಿಕವಾಗಿ ಸ್ಪರ್ಧೆ ಮಾಡಬೇಕು. ಸ್ಪರ್ಧೆ ಒಪ್ಪಿಕೊಂಡಿದ್ದೇವೆ. ಆದರೆ, ತಯಾರಿ ಮಾಡಿಲ್ಲ. ಎನ್ಇಪಿಯಿಂದ ಶಿಕ್ಷಣದಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ. ಇಂಥ ಬದಲಾವಣೆ ಸಂದರ್ಭದಲ್ಲಿ ಪರ ವಿರೋಧ ಅಭಿಪ್ರಾಯ ಸಾಮಾನ್ಯ’ ಎಂದು ಹೇಳಿದರು.

‘ಅಡೆತಡೆಗಳನ್ನು ಮೀರಿ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಈ ನೀತಿಯನ್ನು ರೂಪಿಸಲಾಗಿದೆ. ಇನ್ನಷ್ಟು ಚರ್ಚೆ, ವಿವಿಧ ಆಯಾಮದಲ್ಲಿ ಚರ್ಚೆ ನಡೆಯಬೇಕಿದೆ. ಸರ್ಕಾರ ಎಲ್ಲ ರೀತಿಯ ಚರ್ಚೆಗೆ ಸಿದ್ಧವಿದೆ. ಮಕ್ಕಳಿಗೆ ಹಲವು ಅವಕಾಶ, ಮುಕ್ತ ವಾತಾವರಣ, ಉತ್ಕೃಷ್ಟ ಕೌಶಲ ನೀಡಲು ಈ ನೀತಿ ಸಹಕಾರಿ ಆಗಲಿದೆ’ ಎಂದು ವಿವರಿಸಿದರು.