ಬಾಳೋಪಾಟ್ ಪೈಪೋಟಿ : ವಿಜೇತರಿಗೆ ಬಹುಮಾನ ವಿತರಣೆ

10/10/2021

ಮಡಿಕೇರಿ ಅ.10 : ಕೊಡವ ಜನಾಂಗವೂ ಪ್ರಪಂಚದ ಪುರಾತನ ಮಾನವ ಕುಲದ ಮೂಲ ಜನಾಂಗವಾಗಿದ್ದು, ಸೃಷ್ಟಿ ಮತ್ತು ಪ್ರಕೃತಿಯೊಂದಿಗೆ ಬಾಳಿ ಬದುಕುತ್ತಿರುವ ಬುಡಕಟ್ಟು ವಂಶ. ಅನಾದಿಕಾಲದಿಂದಲೂ ಅಗ್ನಿ ಮತ್ತು ಹಿರಿಯರನ್ನು ಪೂಜಿಸುವ ಕೊಡವರು, ಪ್ರತಿಯೊಂದು ವಸ್ತುವಿನಲ್ಲಿಯೂ ದೇವಿ ಅಥವಾ ತಾಯಿಯನ್ನು ಕಾಣುತ್ತಾರೆ. ಇಂದಿಗೂ ಕೂಡ ಹೆಣ್ಣಿಗೆ ವಿಶೇಷ ಗೌರವ ಕೊಡವ ಮುಂಚೂಣಿ ಜನಾಂಗವೆಂದರೆ ಅದು ಕೊಡವರು. ಜಾನಪದ ಬಾಳೋಪಾಟಿನಲ್ಲಿ ಕೊಡವತನ ಅಡಗಿದ್ದು, ಪ್ರತಿಯೊಬ್ಬರೂ ಇದನ್ನು ಅರಿಯುವ ಅನಿವಾರ್ಯತೆ ಇದೆ ಎಂದು  ಅಖಿಲ ಕೊಡವ ಸಮಾಜದಲ್ಲಿ ನಡೆದ ಕೊಡವ ಕೌಟುಂಬಿಕ ಬಾಳೋ ಪಾಟ್ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭದಲ್ಲಿ ನೆರೆದ ಅತಿಥಿಗಳು ಅಭಿಪ್ರಾಯ ಪಟ್ಟರು.
     ಕೊಡವಾಮೆರ ಕೊಂಡಾಟ ಸಂಘಟನೆಯ ಸ್ಥಾಪಕ ಅಧ್ಯಕ್ಷ ಚಾಮೆರ ದಿನೇಶ್’ಬೆಳ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅಖಿಲಕೊಡವ ಸಮಾಜ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಮಾತನಾಡಿ, ಪ್ರಾರಂಭವಾಗಿ ಕೇವಲ ಎರಡೇ ವರ್ಷದಲ್ಲಿ ಅತೀ ಹೆಚ್ಚು ಸೇವೆ ಮಾಡಿರುವ ಸಂಘಟನೆ ಕೊಡವಾಮೆರ ಕೊಂಡಾಟ,  ನಿರಂತರ ಕಾರ್ಯಚಟುವಟಿಕೆಯ ಮೂಲಕ, ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿದೆ. ಅದರಲ್ಲೂ ವಿನಾಶದ ಅಂಚಿನಲ್ಲಿದ್ದ ಬಾಳೋಪಾಟ್ ಸ್ಪರ್ಧೆ ಆಯೋಜನೆ  ಮಾಡುವ ಮೂಲಕ, ಕೊಡವರ ಮೂಲ ಇತಿಹಾಸದ ಅರಿವು ಮೂಡಿಸಿರುವುದು ಹೆಮ್ಮೆಯ ವಿಚಾರ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸ್ಪರ್ಧೆಯ ಮೊದಲ ನಗದು ಬಹುಮಾನ ಪ್ರಾಯೋಜಕರೂ ಹಾಗೂ ಮೈಸೂರು ವಿಶ್ವ ವಿದ್ಯಾನಿಲಯ ಸಿಂಡಿಕೇಟ್ ಸದಸ್ಯ ಮಾಚಿಮಂಡ ಗಪ್ಪಣ್ಣ ಮಾತನಾಡಿ, ಕೊಡವ ಭಾಷೆ, ಸಾಹಿತ್ಯದ ಬೆಳವಣಿಗೆಗೆ ಪೂರಕವಾದ ಕಾರ್ಯಕ್ರಮಗಳು ನಡೆಯಬೇಕೆಂದರು.
ಕೊಂಡಾಟ ಸಂಘಟನೆಯ ಖಜಾಂಚಿ ಹಾಗೂ ದ್ವಿತೀಯ ನಗದು ಬಹುಮಾನ ಪ್ರಾಯೋಜಕ ಸಣ್ಣುವಂಡ ಕಿಶು ದೇವಯ್ಯ ಮಾತನಾಡಿ, ಸಂಘಟನೆಯು ಈ ಭಾರಿ   ಪ್ರಥಮವಾಗಿ ಪ್ರಾರಂಭಿಸಿರುವ ಈ ಬಾಳೋಪಾಟ್ ಸ್ಪರ್ಧೆಯು ಮುಂದೆ ವರ್ಷಂಪ್ರತಿ ನಡೆಯಲಿದೆ, ಇದಕ್ಕೆ ಎಲ್ಲರ ಸಹಕಾರ ಇರಲಿ ಎಂದರು. ಪ್ರಾಸ್ತವಿಕವಾಗಿ ಮಾತನಾಡಿದ ಕೊಡವಾಮೆರ ಕೊಂಡಾಟ ಸಂಘಟನೆಯ ನಿರ್ದೇಶಕ ಮೂರನೇ ನಗದು ಬಹುಮಾನ ಪ್ರಾಯೋಜಕ ಚಿರಿಯಪಂಡ ವಿಶು ಕಾಳಪ್ಪ ಅವರು, ಸಂಘಟನೆಯ ಧ್ಯೇಯ ಮತ್ತು ಸ್ಪರ್ಧೆ ನಡೆದ ಹಾದಿಯನ್ನು ವಿವರಿಸಿದರು.
ತೀರ್ಪುಗಾರರಾದ ಚೀಯಕ್’ಪೂವಂಡ ದೇವಯ್ಯ,  ಕಾಳಿಮಾಡ ಮೋಟಯ್ಯ, ವಿಜೇತರಾದ ನಂದಿರ, ಓಡಿಯಂಡ, ಚೇನಂಡ ಒಕ್ಕ ಪ್ರತಿನಿಧಿಗಳು ಮಾತನಾಡಿದರು.  ಸ್ಪರ್ಧೆಯ ಎಲ್ಲಾ ಸ್ಮರಣಿಕೆಗಳನ್ನು ಪ್ರಾಯೋಜಕರಾದ ಚಿರಿಯಪಂಡ ರೇಖವಿಶು ಅವರು ಪ್ರಾಯೋಜಿಸಿದರು.
ವೇದಿಕೆಯಲ್ಲಿ ಅಖಿಲ ಕೊಡವ ಸಮಾಜ ಗೌರವ ಕಾರ್ಯದರ್ಶಿ ಅಮ್ಮಣಿಚಂಡ ರಾಜ್ ನಂಜಪ್ಪ, ಹಿರಿಯ ಕಲಾವಿದ ನೆರವಂಡ ಉಮೇಶ್, ಸಾಹಿತಿ ಕರೋಟಿರ ಶಶಿ ಸುಬ್ರಮಣಿ ಅವರುಗಳು ಉಪಸ್ಥಿತರಿದ್ದರು.
 ಸಂಘಟನೆಯ ಹಿರಿಯ ಸದಸ್ಯ ಮಾಳೇಟಿರ ಶ್ರೀನಿವಾಸ್ ಅವರು ಒಕ್ಕಣೆ ಕಟ್ಟಿ ಕಾರೋಣರಿಗೆ ಅಕ್ಕಿ ಹಾಕಿದರೆ, ಉಪಾಧ್ಯಕ್ಷ  ಮಾಳೇಟಿರ ಅಜಿತ್ ಪೂವಣ್ಣ ಸ್ವಾಗತಿಸಿ, ಪೈಪೋಟಿ ಸಂಚಾಲಕ ಕುಂಞಿರ ಗಿರೀಶ್ ಭೀಮಯ್ಯ ಅವರು ವಂದಿಸಿ, ಸದಸ್ಯೆ ಕುಲ್ಲಚಂಡ ದೇಚಮ್ಮ ಕೇಸರಿ ಕಾರ್ಯಕ್ರಮ ನಿರೂಪಿಸಿದರು.