ನೆಲ್ಯಹುದಿಕೇರಿ ಬೆಟ್ಟದಕಾಡು : ಮನೆ ಬಾಗಿಲಿಗೆ ಬರುತ್ತೆ ಗಾಂಜಾ !

10/10/2021

ಮಡಿಕೇರಿ ಅ.10 : ಕೊಡಗಿನಲ್ಲಿ ಗಾಂಜಾ ದಂಧೆಯನ್ನು ಬೇರು ಸಹಿತ ಕಿತ್ತು ಹಾಕಬೇಕೆಂದು ಪೊಲೀಸರು ಎಷ್ಟೇ ಪ್ರಯತ್ನಿಸಿದರೂ ಮತ್ತೆ ಮತ್ತೆ ಅಕ್ರಮ ಚಿಗುರೊಡೆಯುತ್ತಿದ್ದು, ಯುವ ಸಮೂಹ ನಶೆಯಲ್ಲಿ ತೇಲಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ.
ನೆಲ್ಯಹುದಿಕೇರಿ ಗ್ರಾ.ಪಂ ವ್ಯಾಪ್ತಿಯ ಬೆಟ್ಟದಕಾಡು ಗ್ರಾಮದಲ್ಲಿ ಆತಂಕಕಾರಿ ಬೆಳವಣಿಗೆಯೊಂದು ಬೆಳಕಿಗೆ ಬಂದಿದ್ದು, ಮನೆ ಬಾಗಿಲಿಗೆ ಗಾಂಜಾ ಸರಬರಾಜಾಗುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ. ಯುವಕರಿರುವ ಮನೆಗಳನ್ನೇ ಗುರಿಯಾಗಿಸಿಕೊಂಡಿರುವ ದಂಧೆಕೋರರು ಆಟೋರಿಕ್ಷಾ ಅಥವಾ ಬೈಕ್‌ಗಳಲ್ಲಿ ಬಂದು ಗಾಂಜಾ ನೀಡುವ ಮೂಲಕ ಅಡ್ಡದಾರಿ ತೋರಿಸುತ್ತಿದ್ದಾರೆ. ಇದರಿಂದ ವ್ಯಸನಿಗಳಾಗಿರುವ ಯುವಕರು ಕೆಲಸಕ್ಕೂ ಹೋಗದೆ ಮನೆಯಲ್ಲೂ ಇರದೆ ಹೊಳೆ, ಕೆರೆ, ಮೋರಿ, ತಡೆಗೋಟೆ ಇನ್ನಿತರ ಪ್ರದೇಶಗಳಲ್ಲಿ ಹೊಗೆಯಾಡುತ್ತಾ ಕಾಲ ಕಳೆಯುತ್ತಾ ಸ್ಥಳೀಯರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದಾರೆ.
ಅಪ್ಪ, ಅಮ್ಮನಿಗೆ ಭಾರವಾಗಿರುವ ಮಕ್ಕಳು ಭಯವನ್ನೂ ಮೂಡಿಸಿದ್ದಾರೆ. ಬೆಳಗ್ಗೆ ಎದ್ದು ಕೆಲಸಕ್ಕೆ ಹೋಗುತ್ತೇವೆ ಎಂದು ಮೊದಲು ಹೊರಡುವ ಯುವಕರು ಪೋಷಕರು ಕೆಲಸಕ್ಕೆ ಹೋಗುವುದನ್ನೇ ಕಾದು ಗೊತ್ತಿಲ್ಲದಂತೆ ಮತ್ತೆ ಮನೆಗೆ ಬಂದು ಸೇರುತ್ತಾರೆ. ದಂಧೆಕೋರರು ಸಮಯ ನೋಡಿಕೊಂಡು ಯುವಕರಿರುವ ಮನೆ ಬಾಗಲು ಬಡಿದು ಗಾಂಜಾ ನೀಡಿ ಹೋಗುತ್ತಾರೆ. ನಂತರ ಊರಿನ ವಿವಿಧೆಡೆ ನಶೆಯಲ್ಲಿ ತೇಲುವ ಯುವಕರು ಸಂಜೆ ಮನೆಗೆ ಬಂದು ವಯಸ್ಸಾದ ಅಪ್ಪ, ಅಮ್ಮನೊಂದಿಗೆ ಕಲಹ ನಡೆಸುತ್ತಿದ್ದಾರೆ.
ಕೆಲಸವೂ ಇಲ್ಲ, ಕೈಯಲ್ಲಿ ಹಣವೂ ಇಲ್ಲದ ಕಾರಣ ಗಾಂಜಾ ಚಟಕ್ಕಾಗಿ ಅಪ್ಪ, ಅಮ್ಮನ ಬಳಿ ಹಣಕ್ಕಾಗಿ ಅತಿರೇಕದ ವರ್ತನೆ ತೋರಿ ಪೀಡಿಸುತ್ತಿದ್ದಾರೆ. ಇದರಿಂದ ಅಸಹಾಯಕರಾಗಿರುವ ಪೋಷಕರು ಕಣ್ಣೀರು ಹಾಕುತ್ತಿದ್ದಾರೆ. ಗಾಂಜಾ ದಂಧೆಯ ಬಗ್ಗೆ ಪೊಲೀಸರಿಗೆ ಮಾಹಿತಿ ಇದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಗಾಂಜಾ ಅಕ್ರಮದ ಬಗ್ಗೆ ಮಾಹಿತಿ ನೀಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಪೊಲೀಸರಿಗೆ ವಿಷಯ ತಿಳಿಸಿದರೆ ದಾಳಿ ಮಾಡದೆ ಮೌನಕ್ಕೆ ಶರಣಾಗುತ್ತಿದ್ದಾರೆ. ಇದರ ಹಿಂದಿನ ಮರ್ಮವೇನು ಎನ್ನುವುದು ತಿಳಿದಿಲ್ಲವೆಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಕ್ಷಣ ಗಾಂಜಾ ದಂಧೆಕೋರರನ್ನು ಬಂಧಿಸಿ ಯುವ ಸಮೂಹ ಹಾದಿ ತಪ್ಪುವುದನ್ನು ತಪ್ಪಿಸಬೇಕು. ತಪ್ಪಿದಲ್ಲಿ ಗಾಂಜಾ ವ್ಯಸನಿಗಳಿಂದ ಮುಂದೆ ಆಗುವ ಅನಾಹುತಗಳಿಗೆ ಪೊಲೀಸರೇ ನೇರ ಹೊಣೆಗಾರರಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.