ಕೊಡವ ಜನಾಂಗಕ್ಕೆ ಬುಡಕಟ್ಟು ಸ್ಥಾನಮಾನ : ಸಿಎನ್‍ಸಿಯಿಂದ ರಾಜಕೀಯ ಮುಖಂಡರುಗಳಿಗೆ ಮನವಿ ಸಲ್ಲಿಕೆ

11/10/2021

ಮಡಿಕೇರಿ,ಅ.11 : ಕೊಡವ ಜನಾಂಗಕ್ಕೆ ದೊರಕಬೇಕಾಗಿರುವ ಬುಡಕಟ್ಟು ಸ್ಥಾನಮಾನದ ಕುರಿತು ಜಿಲ್ಲೆಯ ವಿವಿಧ ರಾಜಕೀಯ ಮುಖಂಡರುಗಳಿಗೆ
ಸಿಎನ್‍ಸಿ ಸದಸ್ಯರು ಜ್ಞಾಪನಾ ಪತ್ರವನ್ನು ನೀಡಿದರು.
ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ನಂದಿನೆರವಂಡ ಯು.ನಾಚಪ್ಪ ನೇತೃತ್ವದಲ್ಲಿ ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ, ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನೀಲ್ ಸುಬ್ರಮಣಿ ಹಾಗೂ ಶಾಂತೆಯಂಡ ವೀಣಾ ಅಚ್ಚಯ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಅವರುಗಳನ್ನು ಸಿಎನ್‍ಸಿ ಸದಸ್ಯರು ಭೇಟಿ ಮಾಡಿ ಕೊಡವ ಜನಾಂಗಕ್ಕೆ ದೊರಕಬೇಕಾದ ಬುಡಕಟ್ಟು ಸ್ಥಾನಮಾನದ ಕುರಿತು ಚರ್ಚಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಅವರಿಗೂ ಜ್ಞಾಪನಾ ಪತ್ರವನ್ನು ಕಳುಹಿಸಲಾಯಿತು.
ಕಾಶ್ಮೀರಕ್ಕೆ ಕಾಶ್ಮೀರಿ ಪಂಡಿತರು ಹೇಗೆ ಮೂಲ ನಿವಾಸಿಗಳೊ, ಅದೇ ರೀತಿ ಕೊಡವರು ಕೊಡಗಿನ ಮೂಲ ನಿವಾಸಿಗಳು. ಆದರೆ ನಮ್ಮ ಇರುವಿಗೆ ದಕ್ಕೆ ತರುವಂತಹ ಕೆಲಸಗಳು ಇತ್ತೀಚಿಗೆ ಆಗುತ್ತಿದೆ. ಗೆಜೆಟಿಯರ್ ಆಫ್ ಕೂರ್ಗ್‍ನಲ್ಲಿ ಕೂಡ ಕೊಡವರ ಬುಡಕಟ್ಟು ಆಹಾರ-ವಿಚಾರಗಳ ಬಗ್ಗೆ ಉಲ್ಲೇಖವಿದೆ. ನಮ್ಮ ಸಂವಿಧಾನಿಕ ಹಕ್ಕಾಗಿರುವ ಬುಡಕಟ್ಟು ಸ್ಥಾನಮಾನದ ಕುರಿತು ಸಿಎನ್‍ಸಿ ಸತತವಾಗಿ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಕೊಡಗಿನ ಮೂಲೆ, ಮೂಲೆಯ ಗ್ರಾಮಗಳ ಮಂದ್‍ಗಳಲ್ಲಿ ಸಭೆ, ಅರಿವು,ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಇದರಿಂದಾಗಿ ಜನಾಂಗದವರಿಗೆ ಬುಡಕಟ್ಟು ಸ್ಥಾನಮಾನದ ಹಕ್ಕಿನ ಕುರಿತು ಅರಿವಾಗಿದೆ.
ಬುಡಕಟ್ಟು ಸ್ಥಾನಮಾನದ ಕುರಿತು ನಡೆಸುತ್ತಿದ್ದ ಅಧ್ಯಯನ ಸಮರ್ಪಕವಾಗಿ ಆಗದ ಕಾರಣ ಸಿಎನ್‍ಸಿ ಆಕ್ಷೇಪ ಹಿನ್ನೆಲೆ ಮರು ಅಧ್ಯಯನ ನಡೆಯುತ್ತಿದ್ದು, ಆದಷ್ಟು ಬೇಗ ಕೊಡವ ಜನಾಂಗಕ್ಕೆ ದೊರಕಬೇಕಾದ ಬುಡಕಟ್ಟು ಸ್ಥಾನಮಾನವನ್ನು ಒದಗಿಸಿಕೊಡಬೇಕೆಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಮನವಿ ನೀಡುವ ಸಂದರ್ಭ ಸಿಎನ್‍ಸಿ ಪ್ರಮುಖರಾದ ಕಲಿಯಂಡ ಪ್ರಕಾಶ್, ಚಂಬಂಡ ಜನತ್, ಕಾಟುಮಣಿಯಂಡ ಉಮೇಶ್, ಬೆಪ್ಪಾಡಿಯಂಡ ಬಿದ್ದಪ್ಪ, ಬೇಪಡಿಯಂಡ ದಿನ, ಪುಲ್ಲೇರ ಕಾಳಪ್ಪ, ಅರೆಯಡ ಗಿರೀಶ್, ಪೋರಿಮಂಡ ದಿನಮಣಿ, ಚೋಲಪಂಡ ನಾಣಯ್ಯ, ನಂದೇಟಿರ ರವಿ, ಪುದಿಯೊಕ್ಕಡ ಕಾಶಿ, ಕುಂಡ್ಯೋಳಂಡ ರಮೇಶ್ ಮುದ್ದಯ್ಯ, ಪುಟ್ಟಿಚಂಡ ಡಾನ್ ದೇವಯ್ಯ ಹಾಜರಿದ್ದರು.