ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ : ಭಕ್ತರ ಹರ್ಷೋದ್ಘಾರ

17/10/2021

ಮಡಿಕೇರಿ ಅ.17 : ನಾಡಿನ ಜೀವನದಿ ಕಾವೇರಿಯ ಉಗಮಸ್ಥಾನ ತಲಕಾವೇರಿಯಲ್ಲಿ ನಿಗಧಿಯಂತೆ ಮಧ್ಯಾಹ್ನ 1 ಗಂಟೆ 11 ನಿಮಿಷಕ್ಕೆ ತೀರ್ಥೋದ್ಭವವಾಯಿತು. ಅರ್ಚಕರ ಮಂತ್ರಘೋಷ ಹಾಗೂ ಭಕ್ತರ ಹರ್ಷೋದ್ಘಾರದ ನಡುವೆ ನಡೆದ ತೀರ್ಥೋದ್ಭವಕ್ಕೆ ಸಾವಿರಾರು ಮಂದಿ ಸಾಕ್ಷಿಯಾದರು.
ಭಕ್ತರಿಗೆ ತಲಕಾವೇರಿ ಪ್ರವೇಶಕ್ಕೆ ಮುಕ್ತ ಅವಕಾಶ ನೀಡಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ಜನ ಹಾಜರಿದ್ದರು. ಪುಷ್ಪಾಲಂಕಾರದಿoದ ಕಂಗೊಳಿಸುತ್ತಿದ್ದ ಪುಣ್ಯಕ್ಷೇತ್ರದಲ್ಲಿ ತೀರ್ಥೋದ್ಭವದ ಅಪರೂಪದ ಕ್ಷಣವನ್ನು ಭಕ್ತರು ಕಣ್ತುಂಬಿಕೊoಡರು.
ಕಾವೇರಿ ಕುಂಡಿಕೆ ಬಳಿಯ ಕೊಳದಲ್ಲಿ ಭಕ್ತರಿಗೆ ಸ್ನಾನ ಮಾಡಲು ಅವಕಾಶ ನೀಡಿರಲಿಲ್ಲ. ಪವಿತ್ರ ತೀರ್ಥವನ್ನು ಸ್ವಯಂ ಸೇವಕರು ವಿತರಿಸಿದರು. ಕೋವಿಡ್ ಮಾರ್ಗಸೂಚಿ ಪಾಲಿಸುವುದರೊಂದಿಗೆ ಜಿಲ್ಲೆ ಮತ್ತು ಹೊರ ಜಿಲ್ಲೆಯ ಭಕ್ತರು ಜಿಲ್ಲಾಡಳಿತದೊಂದಿಗೆ ಸಹಕರಿಸಿದರು.
ಕೆಲವು ಸಂಘ ಸಂಸ್ಥೆಗಳು ಕ್ಷೇತ್ರದಲ್ಲಿ ಅನ್ನದಾನದ ವ್ಯವಸ್ಥೆಯನ್ನು ಕಲ್ಪಿಸಿದ್ದು, ಇದು ಸೋಮವಾರವೂ ಮುಂದುವರೆಯಲಿದೆ. ಭಕ್ತರು ಮೊದಲಿಗೆ ಭಾಗಮಂಡಲದ ತ್ರಿವೇಣಿ ಸಂಗಮ ಮತ್ತು ಶ್ರೀಭಗಂಡೇಶ್ವರ ದೇವಾಲಯದಲ್ಲಿ ಮೊದಲು ಪೂಜೆ ಸಲ್ಲಿಸಿ ನಂತರ ತಲಕಾವೇರಿಗೆ ತೆರಳಿದರು.
ಸಚಿವ ನಾರಾಯಣಗೌಡ, ವಿರಾಜಪೇಟೆ ಕ್ಷೇತ್ರದ ಶಾಶಕ ಕೆ.ಜಿ.ಬೋಪಯ್ಯ, ಮಡಿಕೇರಿ ಕ್ಷೇತ್ರದ ಎಂ.ಪಿ.ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯರುಗಳಾದ ಎಂ.ಪಿ.ಸುನೀಲ್ ಸುಬ್ರಮಣಿ, ಶಾಂತೆಯoಡ ವೀಣಾಅಚ್ಚಯ್ಯ, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕ್ಷಮಾಮಿಶ್ರ, ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ, ಕೆಪಿಸಿಸಿ ಪ್ರಮುಖರಾದ ಕೆ.ಪಿ.ಚಂದ್ರಕಲಾ ಮತ್ತಿತರ ಪ್ರಮುಖರು ಹಾಗೂ ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.