ಕುಶಾಲನಗರ : ಕಾವೇರಿ ನದಿಗೆ ಮಹಾ ಆರತಿ : ತುಲಾಸಂಕ್ರಮಣ ಆಚರಣೆ

17/10/2021

ಕುಶಾಲನಗರ ಆ 17 : ತಲಕಾವೇರಿಯಲ್ಲಿ ಮಾತೆ ಕಾವೇರಿ  ತೀರ್ಥೋದ್ಭವ ಹಿನ್ನೆಲೆಯಲ್ಲಿ ಭಾನುವಾರ  ಕಾವೇರಿ ನದಿ ತಟದ ಪ್ರಮುಖ  ಪ್ರದೇಶಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.
ಕುಶಾಲನಗರದ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದ ಬಳಿ ಕಾವೇರಿ ಆರತಿ ಕ್ಷೇತ್ರದಲ್ಲಿ  ನದಿಗೆ  ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.  ನದಿ ತಟದಲ್ಲಿ ಅಷ್ಟೋತ್ತರ ಮತ್ತಿತರ ಪೂಜಾ ವಿಧಿವಿಧಾನಗಳು ನಡೆದು  ಮಹಾ ಆರತಿ ಬೆಳಗಿ ಪೂಜಿಸಲಾಯಿತು. ಕಾವೇರಿ ಮಹಾ ಆರತಿ ಬಳಗದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ
ಅರ್ಚಕರಾದ ಕೃಷ್ಣಮೂರ್ತಿ ಭಟ್ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನಡೆದವು. ಕುಶಾಲನಗರ ಮಹಿಳಾ ಭಜನಾ ಮಂಡಳಿ ಸದಸ್ಯರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು .
ಕಾವೇರಿ ಮಹಾ ಆರತಿ ಬಳಗದ ಪ್ರಮುಖರಾದ ವನಿತಾ ಚಂದ್ರಮೋಹನ್, ಕಾವೇರಿ ರಿವರ್ ಸೇವಾ ಟ್ರಸ್ಟ್ ಅಧ್ಯಕ್ಷರಾದ ಎಂ ಎನ್ ಚಂದ್ರಮೋಹನ್, ಪ್ರಧಾನ ಕಾರ್ಯದರ್ಶಿ ಮಂಡೇಪಂಡ ಬೋಸ್ ಮೊಣ್ಣಪ್ಪ,  ಪ್ರಮುಖರಾದ  ಡಿ.ಆರ್.ಸೋಮಶೇಖರ್, ಶಿವಾನಂದನ್, ವೈಶಾಕ್, ವಿ ಡಿ ಪುಂಡರೀಕಾಕ್ಷ , ವಿ ಆರ್ ಶಿವಶಂಕರ್, ಭಜನಾ ಮಂಡಳಿ ಸದಸ್ಯರು ಮತ್ತಿತರರಿದ್ದರು.
    ಕುಶಾಲನಗರ ಕೊಪ್ಪ ಗಡಿಭಾಗದ ಕಾವೇರಿ ಪ್ರತಿಮೆ ಬಳಿ ತೀರ್ಥೋದ್ಭವ  ಅಂಗವಾಗಿ ಕಾವೇರಿ ಪ್ರತಿಮೆಗೆ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.  ಈ ಸಂದರ್ಭ ರವಿಚಂದ್ರನ್ ಕನ್ನಡ ಸಂಘದ ಬಬೀಂದ್ರ ಪ್ರಸಾದ್, ರವೀಂದ್ರ ಪ್ರಸಾದ್, ವಿಜೇಂದ್ರ ಪ್ರಸಾದ್ ಮತ್ತಿತರರಿದ್ದರು.
ತೀರ್ಥೋದ್ಭವ ಹಿನ್ನೆಲೆಯಲ್ಲಿ ರಾಮನಾಥಪುರ,  ಶ್ರೀರಂಗಪಟ್ಟಣ ಕ್ಷೇತ್ರಗಳು  ಸೇರಿದಂತೆ ವಿವಿಧೆಡೆ ನದಿ ತೀರಗಳಲ್ಲಿ  ವಿಶೇಷ ಆರತಿ ಕಾರ್ಯಕ್ರಮಗಳು ಜರಗಿದವು.