ಮಡಿಕೇರಿಯಲ್ಲಿ ಡಿಕೆಡಿ ಜೋಡಿ : ಸಾಧನೆಗೆ ಪರಿಶ್ರಮ ಅಗತ್ಯ : ರಾಹುಲ್, ಬೃಂದಾ

17/10/2021

ಮಡಿಕೇರಿ ಅ.17 : ಯಾವುದೇ ಕ್ಷೇತ್ರದಲ್ಲಾಗಲಿ ಸಾಧನೆ ಮಾಡಬೇಕೆಂದರೆ ಕಠಿಣ ಅಭ್ಯಾಸ ಹಾಗೂ ಪರಿಶ್ರಮ ಮುಖ್ಯವೆಂದು ಝೀ ಕನ್ನಡ ವಾಹಿನಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋನಾ ಚಾಂಪಿಯನ್ ಗಳಾದ ರಾಹುಲ್ ರಾವ್ ಹಾಗೂ ಬೃಂದಾ ಜೋಡಿ ಅಭಿಪ್ರಾಯಪಟ್ಟರು.    ಬಹುಮಾನ ಗೆದ್ದ ಬಳಿಕ ತವರಿಗೆ ಇಂದು ಆಗಮಿಸಿದ ರಾಹುಲ್ ಹಾಗೂ ಬೃಂದಾ ಅವರನ್ನು ಮಡಿಕೇರಿಯ ಕಿಂಗ್ಸ್ ಆಫ್ ಕೂರ್ಗ್ ನೃತ್ಯ ಸಂಸ್ಥೆಗೆ ಭೇಟಿ ನೀಡಿದ ಸಂದರ್ಭ ಅವರುಗಳನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ, ಸಂಸ್ಥೆಯ ನೃತ್ಯಪಟುಗಳೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದ ರಾಹುಲ್, ಸತತ ಅಭ್ಯಾಸ ವ್ಯಕ್ತಿಯನ್ನು ಪರಿಪೂರ್ಣವನ್ನಾಗಿಸುತ್ತದೆ. ಯಾವುದೇ ಸಾಧನೆ ಮಾಡಬೇಕಿದ್ದರೂ ಕಠಿಣ ಪರಿಶ್ರಮ ಅವಶ್ಯವೆಂದರು. ಡಿಕೆಡಿಯ ಸುದೀರ್ಘ ಪಯಣದ ಬಗ್ಗೆ ಮಕ್ಕಳೊಂದಿಗೆ ಹಂಚಿಕೊoಡರು.  ಬೃಂದಾ ಪ್ರಭಾಕರ್ ಮಾತನಾಡಿ, ಡಿಕೆಡಿಯಲ್ಲಿ ಗೆಲುವು ಸಾಧಿಸಿದ್ದಕ್ಕಿಂತ ಕಲಿತದ್ದೇ ಹೆಚ್ಚು, ಸಾಕಷ್ಟು ಕಲಿತಿದ್ದೇವೆ, ಎಲ್ಲಕ್ಕಿಂತ ಸಂತೋಷ ತಂದಿರುವದು ಕೊಡಗಿಗೆ  ಭೇಟಿ ನೀಡಿದಾಕ್ಷಣ ಇಲ್ಲಿನ ಜನರು ತೋರಿದ ಪ್ರೀತ, ಅಭಿಮಾನ, ಆತಿತ್ಯವೆಂದು ಹೆಮ್ಮೆ ವ್ಯಕ್ತ ಪಡಿಸಿದರು. ಅತಿಥಿಯಾಗಿದ್ದ ನಗರ ಸಭಾ ಸದಸ್ಯೆ ಸವಿತಾ ರಾಖೇಶ್ ಮಾತನಾಡಿ,  ಕೊಡಗಿನ ನೃತ್ಯಪಟು ಪ್ರಥಮ ಬಾರಿಗೆ ಗೆಲುವು ಸಾಧಿಸಿರುವದು ಜಿಲ್ಲೆಗೆ ಹೆಮ್ಮೆಯ ವಿಷಯ., ಈ ಸಂಸ್ಥೆಯ ಮಕ್ಕಳು ಕೂಡ ಸಾಧನೆ ಮಾಡುವಂತಾಗಬೇಕೆಂದು ಹಾರೈಸಿದರು. ಮತ್ತೋರ್ವ ಅತಿಥಿ ಪತ್ರಕರ್ತ ಕುಡೆಕಲ್ ಸಂತೋಷ್ ಮಾತನಾಡಿ, ಸಾಧನೆ ಮಾಡಲು ಧೈರ್ಯ, ಛಲ ಇರಬೇಕು, ಸಾಧನೆ ಮಾಡಿದವರನ್ನು ಪ್ರೇರಕರನ್ನಾಗಿರಿಸಿಕೊಂಡು ಸಾಧಿಸಬೇಕೆಂದು ಹೇಳಿದರು. ಆಸಕ್ತಿ ಇರುವ ಕ್ಷೇತ್ರಗಳಲ್ಲಿ ಸಣ್ಣ ವಯಸಿನಿಂದಲೇ ಅಭ್ಯಸಿಸುತ್ತಾ ಮುನ್ನಡೆದರೆ ಯಶಸ್ಸು ಸಿಗಲಿದೆ ಎಂದರು.   ಸಂಸ್ಥೆಯ ಪೋಷಕರಾದ ಸವಿತಾ ಅರುಣ್ ಶುಭ ಹಾರೈಸಿದರು. ರಾಹುಲ್ ಅವರ ನೃತ್ಯಗುರು ವಿನೋದ್ ಕರ್ಕೇರ ಮಡಿಕೇರಿಯಲ್ಲೊಂದು ಉತ್ತಮ ವೇದಿಕೆ ಹಾಗೂ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಕಲಾವಿದರಿಗರ ನಗರಸಭೆಯಿಂದ ಶಿಷ್ಯವೇತನ ಕೊಡಿಸುವಂತೆ ಮನವಿ ಮಾಡಿದರು.   ಈ ಸಂದರ್ಭದಲ್ಲಿ ಸಂಸ್ಥೆಯ ನೃತ್ಯ ಸಂಯೋಜಕ ಮಹೇಶ್, ತರಬೇತುದಾರ ಕಿರಣ್,  ಪೋಷಕರಾದ ಕುಡೆಕಲ್ ಸವಿತಾ,  ಅನಿತಾ ವೆಂಕಟೇಶ್  ನೃತ್ಯಪಟುಗಳು, ಪೋಷಕರು ಹಾಜರಿದ್ದರು.