ಕಲಬುರಗಿ : ಭಾರತದ ಅತಿ ದೊಡ್ಡದಾದ ಬುದ್ಧವಿಹಾರ

18/10/2021

ವಾಣಿಜ್ಯ ಬೆಳೆಗೆ ಹೆಸರಾದ ಕಲಬುರಗಿ ತನ್ನದೇ ಆದ ವಿಶೇಷ ಪ್ರವಾಸ ತಾಣಗಳನ್ನು ಒಳಗೊಂಡಿದೆ. ಅದರಲ್ಲಿ ಬುದ್ಧ ವಿಹಾರವೂ ಒಂದು. ಭಾರತದಲ್ಲೇ ಅತಿ ದೊಡ್ಡದಾದ ಕಲಬುರಗಿ ಬುದ್ಧವಿಹಾರ ಇಲ್ಲಿಯ ಹಿರಿಮೆಯನ್ನು ಹೆಚ್ಚಿಸಿದೆ.

70 ಎಕರೆ ಪ್ರದೇಶ, 32,450 ಚದರ ಅಡಿ ವ್ಯಾಪ್ತಿಯಲ್ಲಿ ನೆಲೆ ನಿಂತು, ದೇಶ ವಿದೇಶದೆಲ್ಲೆಡೆ ಸುದ್ದಿ ಮಾಡಿದೆ. ಈ ಭವ್ಯ ವಿಹಾರಕ್ಕೆ 8 ಕೋಟಿ ರೂಪಾಯಿ ವೆಚ್ಚಮಾಡಲಾಗಿದೆ. ವಿಹಾರದ ಶಿಲ್ಪಕಲೆಗಳು ಅಜಂತಾ ಹಾಗೂ ಎಲ್ಲೋರಾ ಮಾದರಿಯನ್ನೇ ಪ್ರತಿಬಿಂಬಿಸುತ್ತವೆ. ಈ ವಿಹಾರಕ್ಕೆ ಆಧಾರವಾಗಿ 170 ಕಂಬಗಳು ನಿಂತಿರುವುದು ಒಂದು ಹಿರಿಮೆ. ವಿಹಾರದ ಮೊದಲ ಮಹಡಿಯಲ್ಲಿ ಮನೋಹರ ಕೆತ್ತನೆಯನ್ನು ಒಳಗೊಂಡ ಎರಡು ಬುದ್ಧನ ಮೂರ್ತಿಗಳಿವೆ. ನೆಲ ಮಹಡಿಯಲ್ಲಿ ಕಪ್ಪು ವಿಗ್ರಹದ ಆರು ಅಡಿ ಎತ್ತರದ ಬುದ್ಧನ ಮೂರ್ತಿ ಇರುವುದನ್ನು ನೋಡಬಹುದು.

ವಿಹಾರದ ನೆಲಮನೆಯಲ್ಲಿ ಸುಮಾರು 2 ಸಾವಿರ ಭಕ್ತರು ಏಕ ಕಾಲದಲ್ಲಿ ಕುಳಿತು ಪ್ರಾರ್ಥನೆ ಸಲ್ಲಿಸುವಷ್ಟು ಸ್ಥಳಾವಕಾಶವಿದೆ. ಇಲ್ಲಿರುವ ಕುಳಿತ ಬುದ್ಧನ ಮೂರ್ತಿಯೂ ಬಹಳ ಆಕರ್ಷಕವಾಗಿದೆ. ಅಶೋಕನ ಮಾದರಿಯಂತೆ ನಾಲ್ಕು ದಿಕ್ಕುಗಳಲ್ಲಿ ಕಂಬಗಳನ್ನು ಇಡಲಾಗಿದೆ. ಈ ವಿಹಾರಕ್ಕೆ ಒಟ್ಟು ಆರು ದ್ವಾರಗಳಿವೆ.

ವಿಹಾರದ ಸುತ್ತಲು ಹಸಿರು ಗಿಡಮರಗಳನ್ನು ಬೆಳೆಸಿ ಸುಂದರ ಪರಿಸರವನ್ನು ನಿರ್ಮಿಸಲಾಗಿದೆ. ವಿಹಾರಕ್ಕೆ ಬರುತ್ತಿದ್ದಂತೆಯೇ ಮನಸ್ಸಿಗೊಂದು ರೀತಿಯ ನಿರಾಳ ಭಾವನೆ ಮೂಡುತ್ತದೆ. ಉದ್ಯಾನವನದಲ್ಲಿ ಕುಳಿತುಕೊಳ್ಳಲು ಮಂಚಗಳ ವ್ಯವಸ್ಥೆಯೂ ಇದೆ. ವಿಹಾರಕ್ಕೆ ಹತ್ತಿರದಲ್ಲಿರುವ ಶರಣ ಬಸವೇಶ್ವರ ದೇಗುಲ, ಕಲಬುರಗಿ ಕೋಟೆ, ವಸ್ತು ಸಂಗ್ರಹಾಲಯವನ್ನು ನೋಡಬಹುದು.