ಕೋವಿಡ್ ಲಸಿಕೆ : ಕೊಡಗು ಜಿಲ್ಲೆ ರಾಜ್ಯದಲ್ಲೇ ಪ್ರಥಮ

22/10/2021

ಮಡಿಕೇರಿ ಅ.22 : ಕೋವಿಡ್ ವಿರುದ್ಧದ ಲಸಿಕೆ ನೀಡಿಕೆಯಲ್ಲಿ ಕೊಡಗು ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದ್ದು, ಶೀಘ್ರದಲ್ಲೇ ಶೇ.100ರಷ್ಟು ಸಾಧನೆ ಮಾಡಲಾಗುವುದು ಎಂದು ಶಾಸಕದ್ವಯರಾದ ಎಂ.ಪಿ.ಅಪ್ಪಚ್ಚುರAಜನ್ ಹಾಗೂ ಕೆ.ಜಿ.ಬೋಪಯ್ಯ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರುಗಳು, ವಿಪಕ್ಷಗಳ ಅಪಪ್ರಚಾರದ ನಡುವೆಯೂ ಬದ್ಧತೆಯ ಕಾರಣದಿಂದ ದೇಶದಲ್ಲಿ 100ಕೋಟಿ ಕೋವಿಡ್ ಲಸಿಕೆ ನೀಡಲು ಸಾಧ್ಯವಾಗಿದ್ದು, ಲಸಿಕೆ ಸಂಶೋಧನೆಗೆ ಶ್ರಮಿಸಿದ ವಿಜ್ಞಾನಿಗಳು, ಲಸಿಕೆ ನೀಡಲು ಅವಿರತವಾಗಿ ಶ್ರಮಿಸಿದ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳು, ಆಶಾ, ಅಂಗನವಾಡಿ ಕಾರ್ಯಕರ್ತರು ಮತ್ತು ಲಸಿಕೆ ಪಡೆದು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಕೊಡಗು ಜಿಲ್ಲೆಯಲ್ಲೂ ಕೆಲವು ವರ್ಗದ ಜನರಿಗೆ ಲಸಿಕೆ ನೀಡುವುದು ಸವಾಲಿನ ಕೆಲಸವಾಗಿತ್ತು. ಆದರೆ ಆರೋಗ್ಯ, ಆಶಾ, ಅಂಗನವಾಡಿ ಕಾರ್ಯಕರ್ತರು, ಪಂಚಾಯತ್ ಮಟ್ಟದ ಟಾಸ್ಕ್ ಫೋರ್ಸ್ ಸಹಕಾರದಿಂದ ಆ ವರ್ಗದವರ ಮನವೊಲಿಸಿ ಲಸಿಕೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದು, ಇನ್ನು ಕೇವಲ 30ಸಾವಿರದಷ್ಟು ಮಂದಿಗೆ ಲಸಿಕೆ ನೀಡಲು ಬಾಕಿ ಇದೆ. ಇದನ್ನು ಆದಷ್ಟು ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದಲ್ಲದೆ, ಜಿಲ್ಲೆಯಲ್ಲಿ ಸಣ್ಣ ಮಕ್ಕಳಿಗೂ ಲಸಿಕೆ ಕೊಡಿಸಲು ತಯಾರಿ ನಡೆಸಲಾಗುತ್ತಿದೆ ಎಂದರು.
ಕೋವಿಡ್ ಸಾಂಕ್ರಮಿಕದ ಸಂದರ್ಭದಲ್ಲಿ ಬಿಜೆಪಿ, ಸಂಘಪರಿವಾರದ ಕಾರ್ಯಕರ್ತರು ಕೂಡಾ ಮುಂಚೂಣಿ ಕಾರ್ಯಕರ್ತರಾಗಿ ಕಾರ್ಯ ನಿರ್ವಹಿಸಿದ್ದು, ವಿಶೇಷವಾಗಿ ಕಿಟ್ ವಿತರಣೆ, ಕೋವಿಡ್ ನಿಂದ ಮೃತಪಟ್ಟವರ ಶವಸಂಸ್ಕಾರ ಮುಂತಾದ ಕೆಲಸಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ಹಾಜರಿದ್ದ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ ಮಾತನಾಡಿ, ಅ.21ಬೆಳಗ್ಗೆ 10 ರ ವೇಳೆಗೆ ದೇಶದಲ್ಲಿ 100 ಕೋಟಿ 15,714 ಜನರಿಗೆ ಲಸಿಕೆ ನೀಡಲಾಗಿದ್ದು, ಈ ಪೈಕಿ 70.83 ಕೋಟಿ ಜನರಿಗೆ ಮೊದಲನೇ ಡೋಸ್ ಲಸಿಕೆ ನೀಡಿದ್ದರೆ, 29.17 ಕೋಟಿ ಜನರಿಗೆ ಎರಡೂ ಡೋಸ್ ಲಸಿಕೆ ಕೊಡಲಾಗಿದೆ ಎಂದು ಹೇಳಿದರು.
ಕೋವಿಡ್ ಲಸಿಕೆ ಸಂಶೋಧನೆಗೆ 2020ರ ಏಪ್ರಿಲ್ ನಲ್ಲೇ ಪ್ರಯತ್ನ ನಡೆಯಿತು. ಕೇಂದ್ರದ ನಿರಂತರ ಪ್ರೋತ್ಸಾಹ ಮತ್ತು ವಿಜ್ಞಾನಿಗಳ ಪರಿಶ್ರಮದ ಫಲವಾಗಿ ಲಸಿಕೆ ಸಂಶೋಧನೆ ಸಾಧ್ಯವಾಗಿ 2021ರ ಜನವರಿ 16 ರಂದು ಪ್ರಧಾನಿಯವರು ಲಸಿಕೆ ಬಿಡುಗಡೆ ಮಾಡಿದರು. ಹಿಂದೆ ವಿವಿಧ ಮಹಾ ಮಾರಿಗಳು ಬಂದಾಗ ಭಾರತ ವಿದೇಶದ ಲಸಿಕೆಗಳನ್ನು ಕಾಯುವಂತಾಗಿದ್ದರೆ, ಈ ಬಾರಿ ಭಾರತವೇ ಇತರ ದೇಶಗಳಿಗೆ ಲಸಿಕೆ ಒದಗಿಸುವಷ್ಟು ಶಕ್ತವಾಗಿದೆ ಎಂದು ಅವರು ಹೆಮ್ಮೆ ವ್ಯಕ್ತಪಡಿಸಿದರು.
ದೇಶದಲ್ಲಿ ವಿರೋಧ ಪಕ್ಷವಾದ ಕಾಂಗ್ರೆಸ್ನ ನಿರಂತರ ಅಪಪ್ರಚಾರ ಮತ್ತು ಅಸಹಕಾರದ ನಡುವೆಯೂ ಈ ಸಾಧನೆ ಮಾಡಲಾಗಿದ್ದು, ಈ ಪೈಕಿ ಶೇ.94 ಲಸಿಕೆ ನೀಡಿಕೆಯು ಕೇವಲ ಸರಕಾರಿ ಸ್ವಾಮ್ಯದ ಸಂಸ್ಥೆಗಳಿAದ ನಡೆದಿದ್ದು, ಶೇ 6ರಷ್ಟು ಮಾತ್ರ ಖಾಸಗಿಯವರಿಂದ ನೀಡಲಾಗಿದೆ. ಜಗತ್ತಿನ 95ಕ್ಕೂ ಹೆಚ್ಚು ದೇಶಗಳು ಭಾರತದಿಂದ ಕೋವಿಡ್ ಲಸಿಕೆಗಳನ್ನು ಪಡೆಯುತ್ತಿವೆ.ಅದಲ್ಲದೆ ಶ್ರೀಮಂತ ರಾಷ್ಟ್ರಗಳನ್ನೂ ಹಿಂದಿಕ್ಕಿ ಭಾರತ ಪ್ರತಿಯೊಬ್ಬರಿಗೂ ಉಚಿತವಾಗಿ ಲಸಿಕೆ ಒದಗಿಸಿದೆ ಎಂದು ಶಾಸಕರು ವಿವರಿಸಿದರು.
ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ ಮಾತನಾಡಿ ಮುಂದುವರಿದ ರಾಷ್ಟçಗಳಿಗೆ ಹೋಲಿಸಿದರೆ, ಭಾರತದಲ್ಲಿ ಕೋವಿಡ್ ಗೆ ಬಲಿಯಾದವರ ಸಂಖ್ಯೆಯೂ ಕಡಿಮೆಯಿದೆ ಎಂದರು. ಕೇಂದ್ರ ಸರಕಾರವು ರಾಜ್ಯಗಳ ಜೊತೆ ನಿರಂತರ ಪತ್ರ ವ್ಯವಹಾರ ನಡೆಸುತ್ತಿದ್ದು, ಮನೆ ಮನೆ ಭೇಟಿ ಮೂಲಕ ಮೊದಲನೇ ಲಸಿಕೆ ಪಡೆಯದವರನ್ನು ಹಾಗೂ ಎರಡನೇ ಲಸಿಕೆ ಪಡೆಯಯುವವರನ್ನು ಗುರುತಿಸಲು ತಿಳಿಸಿದೆ ಎಂದರು.
ಅಕ್ಟೋಬರ್ 14ರ ವೇಳೆಗೆ ಒಟ್ಟು 98.68 ಕೋಟಿ ಡೋಸ್ ಲಸಿಕೆ ಪೂರೈಸಿದ್ದು, 8.34 ಕೋಟಿ ರಾಜ್ಯಗಳಲ್ಲಿ ದಾಸ್ತಾನಿದೆ.ಕೋವಿಶೀಲ್ಡ್, ಕೋವ್ಯಾಕ್ಸಿನ್ ಮತ್ತು ಇತರ ಲಸಿಕೆಗಳಿಗಾಗಿ ಕೇಂದ್ರ ಸರಕಾರ 34,515 ಕೋಟಿ ವೆಚ್ಚ ಮಾಡಿದ್ದು, ಈ ಪೈಕಿ 1392 ಕೋಟಿಯನ್ನು ಪ್ರಧಾನ ಮಂತ್ರಿ ಫಂಡ್ನಿAದ ಭರಿಸಲಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಬಿ.ಬಿ.ಭಾರತೀಶ್ ಹಾಗೂ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ ಉಪಸ್ಥಿತರಿದ್ದರು.