ಕೊಡಗು : 2 ನೇ ಹಂತದ ಲಸಿಕೆ : ಪ್ರಗತಿ ಸಾಧಿಸಲು ವಿ.ಅನ್ಬುಕುಮಾರ್ ಸೂಚನೆ

26/10/2021

ಮಡಿಕೇರಿ ಅ.26 : ಕೊಡಗು ಜಿಲ್ಲೆಯಲ್ಲಿ ಕೋವಿಡ್ ಲಸಿಕಾ ಎರಡನೇ ಹಂತದ ಅಭಿಯಾನವು ಮಂದಗತಿಯಲ್ಲಿ ನಡೆಯುತ್ತಿದ್ದು, ಎರಡನೇ ಹಂತದ ಲಸಿಕಾ ಕಾರ್ಯ ಪ್ರಗತಿ ಸಾಧಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವೈದ್ಯಾಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ.ಅನ್ಬುಕುಮಾರ್ ಅವರು ನಿರ್ದೇಶನ ನೀಡಿದ್ದಾರೆ.
ನಗರದ ಜಿ.ಪಂ.ಸಭಾAಗಣದಲ್ಲಿ ಕೋವಿಡ್-19 ನಿಯಂತ್ರಣ, ಲಸಿಕಾ ಪ್ರಗತಿ ಹಾಗೂ ವಿವಿಧ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಂಗಳವಾರ ಮಾಹಿತಿ ಪಡೆದು ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಮೊದಲ ಹಂತದ ಲಸಿಕೆಯನ್ನು 18 ವರ್ಷ ಮೇಲ್ಪಟ್ಟ 4 ಲಕ್ಷ ಜನರಲ್ಲಿ 3,84,253 ಮಂದಿ ಪ್ರಥಮ ಲಸಿಕೆ ಪಡೆದು ಶೇ.96 ರಷ್ಟು ಸಾಧನೆ ಮಾಡಲಾಗಿದೆ. ಎರಡನೇ ಲಸಿಕೆಯನ್ನು 2,01,074 ಮಂದಿ ಪಡೆದು ಶೇ.50.27 ರಷ್ಟು ಪ್ರಗತಿ ಸಾಧಿಸಲಾಗಿದೆ. ಆದ್ದರಿಂದ ಪ್ರಥಮ ಹಂತದ ಲಸಿಕೆ ಪಡೆದವರು ಇನ್ನೂ ಶೇ.45 ಕ್ಕಿಂತ ಹೆಚ್ಚು ಜನರು ಎರಡನೇ ಲಸಿಕೆ ಪಡೆಯಬೇಕಿದ್ದು, ಎರಡನೇ ಲಸಿಕೆ ಪಡೆಯುವಂತಾಗಲು ಅಗತ್ಯ ಕ್ರಮವಹಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅವರು ಸೂಚಿಸಿದರು.
ಕೋವಿಡ್-19 ತೊಲಗಿತು ಎಂದು ಹೆಚ್ಚಿನ ಜನರು ಭಾವಿಸಿದ್ದಾರೆ. ಅದು ಸರಿಯಲ್ಲ, ಜನರಲ್ಲಿ ಕೋವಿಡ್ ಲಸಿಕೆ ಪಡೆಯುವಂತಾಗಲು ಮನವಿ ಮಾಡಬೇಕು, ಆ ನಿಟ್ಟಿನಲ್ಲಿ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅವರು ಸಲಹೆ ಮಾಡಿದರು.
ಸ್ಥಳೀಯ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು, ಆಶಾ ಕಾರ್ಯಕರ್ತರು ಹೀಗೆ ಎಲ್ಲರ ವಿಶ್ವಾಸ ಪಡೆದು ಎರಡನೇ ಲಸಿಕೆ ಪ್ರಗತಿ ಸಾಧಿಸಲು ಮುಂದಾಗಬೇಕು. ಈ ಬಗ್ಗೆ ಮತ್ತಷ್ಟು ವೇಗ ಪಡೆಯಬೇಕು. ಆ ನಿಟ್ಟಿನಲ್ಲಿ ಕ್ರಮವಹಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಕೋವಿಡ್ ಲಸಿಕಾ ಅಭಿಯಾನ ಪ್ರಗತಿ ಸಂಬoಧಿಸಿದoತೆ ರಾಜ್ಯದಲ್ಲಿ ಕೊಡಗು ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ಆದರೆ ಎರಡನೇ ಹಂತದ ಲಸಿಕಾ ಅಭಿಯಾನ ಮತ್ತಷ್ಟು ಪ್ರಗತಿ ಸಾಧಿಸಬೇಕಿದೆ ಎಂದರು.
ಎರಡನೇ ಲಸಿಕೆ ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ಪ್ರಥಮ ಲಸಿಕೆ ಪಡೆದಿರುವವರ ಮೊಬೈಲ್ ಸಂಖ್ಯೆಗೆ ಸಂದೇಶ ಕಳುಹಿಸಲಾಗುತ್ತಿದೆ. ಹಾಗೆಯೇ ಮನೆ ಮನೆಗೆ ಭೇಟಿ ನೀಡಿ ಮನವರಿಕೆ ಮಾಡಲಾಗುತ್ತದೆ ಎಂದು ಅವರು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ವೆಂಕಟೇಶ್ ಅವರು ಮಾಹಿತಿ ನೀಡಿ ಜಿಲ್ಲೆಯಲ್ಲಿ ಮೊದಲ ಹಂತದ ಲಸಿಕೆಯನ್ನು ಶೇ.96 ರಷ್ಟು ಮತ್ತು ಎರಡನೇ ಹಂತದ ಲಸಿಕೆಯನ್ನು ಶೇ.50 ರಷ್ಟು ಪ್ರಗತಿ ಸಾಧಿಸಲಾಗಿದೆ. ಎರಡನೇ ಹಂತದ ಲಸಿಕೆ ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ಮನೆ ಮನೆಗೆ ಭೇಟಿ ನೀಡಿ ಮಾಹಿತಿ ನೀಡಲಾಗುತ್ತದೆ. ಹಾಗೆಯೇ ಎಸ್‌ಎಂಎಸ್ ಮೂಲಕ ಸಂದೇಶ ಕಳುಹಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಕಳೆದ ಹತ್ತು ದಿನದಲ್ಲಿ (ಅ.16 ರಿಂದ ಅ.25 ರವರೆಗೆ) 20,471 ಮಂದಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದ್ದು, ಇವರಲ್ಲಿ 61 ಮಂದಿಗೆ ಪಾಸಿಟಿವ್ ದೃಢಪಟ್ಟಿದ್ದು, ಇಬ್ಬರು ಹಲವು ಕಾರಣಗಳಿಂದ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರು ಮಾಹಿತಿ ನೀಡಿದರು.
ಈ ಬಗ್ಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ.ಅನ್ಬುಕುಮಾರ್ ಅವರು ಕಳೆದ ಹತ್ತು ದಿನದಲ್ಲಿ 61 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಇವರಲ್ಲಿ ಎಷ್ಟು ಮಂದಿ ಪ್ರಥಮ ಮತ್ತು ದ್ವಿತೀಯ ಹಂತದ ಕೋವಿಡ್ ನಿಯಂತ್ರಣ ಲಸಿಕೆ ಪಡೆದಿದ್ದರು ಮಾಹಿತಿ ನೀಡುವಂತೆ ಸೂಚಿಸಿದರು.
ಕೋವಿಡ್‌ನಿಂದ ಯಾರೂ ಮೃತಪಡಬಾರದು. ಆ ನಿಟ್ಟಿನಲ್ಲಿ ಕೋವಿಡ್ ನಿಯಂತ್ರಣ ಲಸಿಕೆ ನೀಡಬೇಕು. ಕೋವಿಡ್ ನಿಯಂತ್ರಣ ಲಸಿಕೆ ಪಡೆಯುವ ಬಗ್ಗೆ ಸಾರ್ವಜನಿಕರಲ್ಲಿ ಮನವರಿಕೆ ಮಾಡಬೇಕು. ಕೋವಿಡ್ ಲಸಿಕೆ ಪ್ರಗತಿ ಸಂಬoಧ ಉಪ ವಿಭಾಗಾಧಿಕಾರಿ ಅವರು ಮೇಲ್ವಿಚಾರಣೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅವರು ತಿಳಿಸಿದರು.
ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ವೆಂಕಟೇಶ್ ಅವರು ಜಿಲ್ಲೆಯಲ್ಲಿ 37 ಡೆಂಗ್ಯೂ, ಇಲಿಜ್ವರ 33, ಮಲೇರಿಯಾ 5, ಚಿಕುನ್‌ಗುನ್ಯ 6 ಪ್ರಕರಣ ಕಂಡು ಬಂದಿದೆ ಎಂದು ಮಾಹಿತಿ ನೀಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈದ್ಯಾಧಿಕಾರಿಗಳು ಸಾಂಕ್ರಾಮಿಕ ರೋಗ ಹೆಚ್ಚು ಕಂಡುಬoದಿರುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಅಗತ್ಯ ಜಾಗೃತಿ ಮೂಡಿಸಬೇಕು ಎಂದರು.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಜಂಬೂರಿನಲ್ಲಿ ಇನ್ಫೋಸಿಸ್ ವತಿಯಿಂದ 100 ಮನೆಗಳನ್ನು ನಿರ್ಮಾಣ ಮಾಡಲಾಗಿದ್ದು, ವಿದ್ಯುತ್, ಚರಂಡಿ, ಕುಡಿಯುವ ನೀರು ಮತ್ತಿತರ ಮೂಲಕ ಸೌಲಭ್ಯ ಕಲ್ಪಿಸಬೇಕಿದೆ ಎಂದು ಅವರು ಹೇಳಿದರು.
ಜಿ.ಪಂ.ಸಿಇಒ ಭನ್ವರ್ ಸಿಂಗ್ ಮೀನಾ ಅವರು ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರಯುಕ್ತ ಅಮೃತ ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಲಾಗಿದ್ದು, ಈ ಗ್ರಾ.ಪಂ. ವ್ಯಾಪ್ತಿಗಳಲ್ಲಿ ಘನ ತ್ಯಾಜ್ಯ ವಿಂಗಡಣೆ ಮತ್ತು ವಿಲೇವಾರಿ, ತ್ಯಾಜ್ಯ ನೀರಿನ ವೈಜ್ಞಾನಿಕ ನಿರ್ವಹಣೆ, ಸೌರ ವಿದ್ಯುತ್ ಘಟಕ ಅಳವಡಿಕೆ, ಡಿಜಿಟಲ್ ಗ್ರಂಥಾಲಯ ಸ್ಥಾಪನೆ, ಅಮೃತಗ್ರಾಮ ವಸತಿ ಯೋಜನೆ ಅನುಷ್ಠಾನ, ಪ್ರಯೋಗಾಲಯ, ಶೌಚಾಲಯ ನಿರ್ಮಾಣ, ಅಂಗನವಾಡಿ ಕೇಂದ್ರಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿ, ಕಿರು ಉದ್ದಿಮೆಗಳ ಆರಂಭ, ಹೀಗೆ ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಜಲ ಜೀವನ್ ಮಿಷನ್ ಯೋಜನೆ, ಸ್ವಚ್ಛ ಭಾರತ ಅಭಿಯಾನದಡಿ ಹೀಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯಿತಿ ಆಡಳಿತಾಧಿಕಾರಿಯಾಗಿರುವ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅನ್ಬುಕುಮಾರ್ ಅವರು ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಈ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಅವರು ತಿಳಿಸಿದರು.
ಪ್ರಸಕ್ತ ವರ್ಷದಲ್ಲಿ ಜಿ.ಪಂ.ವ್ಯಾಪ್ತಿಗೆ ಬಿಡುಗಡೆಯಾದ ಅನುದಾನವನ್ನು ಸಮರ್ಪಕವಾಗಿ ಬಳಸಬೇಕು. ಯಾವುದೇ ಕಾರಣಕ್ಕೂ ವ್ಯಪಗತವಾಗದಂತೆ ಎಚ್ಚರವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಆಡಳಿತಾಧಿಕಾರಿ ಅವರು ನಿರ್ದೇಶನ ನೀಡಿದರು.
ಉಪವಿಭಾಗಾಧಿಕಾರಿ ಈಶ್ವರ ಕುಮಾರ್ ಖಂಡು, ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ.ಕಾರ್ಯಪ್ಪ, ಜಿಲ್ಲಾ ಕೋವಿಡ್ ಆಸ್ಪತ್ರೆಯ ಅಧೀಕ್ಷಕರಾದ ಡಾ.ಮಂಜುನಾಥ್ ಅವರು ಕೋವಿಡ್ ಸಂಬoಧಿಸಿದoತೆ ಮಾಹಿತಿ ನೀಡಿದರು.