ಜಿಲ್ಲಾ ಮಟ್ಟದ ಯುವ ಜನೋತ್ಸವ : ದುಶ್ಚಟ ಮುಕ್ತರಾಗಿ ರಾಷ್ಟ್ರದ ಅಭಿವೃದ್ಧಿಗೆ ಮುಂದಾಗಿ : ಎಂಎಲ್‌ಸಿ ವೀಣಾಅಚ್ಚಯ್ಯ ಕರೆ

26/10/2021

ಮಡಿಕೇರಿ ಅ.26 : ಯುವ ಸಮೂಹ ದುಶ್ಚಟಗಳಿಗೆ ದಾಸರಾಗದೆ, ಸತ್ಪ್ರಜೆಗಳಾಗಿ ರೂಪುಗೊಂಡು ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆಯನ್ನು ನೀಡಬೇಕೆಂದು ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಕರೆ ನೀಡಿದ್ದಾರೆ.
ಕರ್ನಾಟಕ ಸರಕಾರ, ಜಿಲ್ಲಾಡಳಿತ, ಕೊಡಗು ಜಿಲ್ಲಾ ಪಂಚಾಯ್ತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಡಗು ಜಿಲ್ಲಾ ಯುವ ಒಕ್ಕೂಟ, ವಿರಾಜಪೇಟೆ, ಸೋಮವಾರಪೇಟೆ ತಾಲ್ಲೂಕು ಯುವ ಒಕ್ಕೂಟ, ನಾಪೋಕ್ಲು ಗ್ರಾಮ ಪಂಚಾಯ್ತಿ, ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಸಂಯುಕ್ತ ಆಶ್ರಯದಲ್ಲಿ, ಬೇತು ಗ್ರಾಮದ ಗೆಳೆಯರ ಬಳಗದ ವತಿಯಿಂದ ಆಯೋಜಿತ ‘ಕೊಡಗು ಜಿಲ್ಲಾ ಮಟ್ಟದ ಯುವ ಜನೋತ್ಸವ 2021-22’ನ್ನು ಜ್ಯೋತಿ ಬೆಳಗಿ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಯುವ ಜನಾಂಗಕ್ಕೆ ಮಾರ್ಗದರ್ಶನದ ಅವಶ್ಯಕತೆ ಹೆಚ್ಚಾಗಿದೆ. ಯುವ ಸಮೂಹ ದೇಶದ ಪ್ರಗತಿಯ ಬಗ್ಗೆ ಚಿಂತನೆ ನಡೆಸಿ, ರಾಷ್ಟ್ರ ರಕ್ಷಣೆಗೆ ಮುಂದಾಗಬೇಕೆoದ ಅವರು, ಯಾವುದೇ ಕಾರಣಕ್ಕೂ ಯುವ ಜನರು ತಪ್ಪು ದಾರಿಯನ್ನು ಹಿಡಿಯದೆ, ಶಿಸ್ತಿನ ಪ್ರಜೆಗಳಾಗಿ ರೂಪುಗೊಳ್ಳ್ಳಬೇಕೆಂದರು.
ಕ್ರೀಡೆಯ ತವರೂರಾಗಿರುವ ಕೊಡಗು ಜಿಲ್ಲೆಯಲ್ಲೆ ಕ್ರೀಡಾಚಟುವಟಿಕೆಗಳಿಗೆ ಅನುದಾನದ ಕೊರತೆ ಇದೆ. ಇದನ್ನು ನೀಗಿಸಲು ಮತ್ತು ಕೊಡಗಿನ ಅಭಿವೃದ್ಧಿಗೆ ಪಕ್ಷ ಭೇದ ಮರೆತು ಜನ ಪ್ರತಿನಿಧಿಗಳು ಶ್ರಮಿಸಬೇಕಾಗಿದೆಯೆಂದರು.
ನಾಪೋಕ್ಲು ಗ್ರಾ.ಪಂ ಅಧ್ಯಕ್ಷೆ ಎಚ್.ಎಸ್.ಪಾರ್ವತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಯುವ ಒಕ್ಕೂಟದ ಜಿಲ್ಲಾಧ್ಯಕ್ಷ ಪಿ.ಪಿ.ಸುಕುಮಾರ್ ಯುವ ಸಬಲೀಕರಣದ ಕುರಿತು ಪ್ರಾಸ್ತವಿಕವಾಗಿ ಮಾತನಾಡಿದರು.
ಗ್ರಾ.ಪಂ ಸದಸ್ಯೆ ರೇಖಾ ಪೂಣಚ್ಚ, ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ಅವನಿಜ ಸೋಮಯ್ಯ, ಉಪಪ್ರಾಂಶುಪಾಲರಾದ ಎ.ಆರ್.ಸೌಭಾಗ್ಯ, ಗೆಳೆಯರ ಬಳಗದ ಅಧ್ಯಕ್ಷ ಎ.ಎಂ.ಪೂಣಚ್ಚ, ತಾಲ್ಲೂಕು ಒಕ್ಕೂಟದ ಅಧ್ಯಕ್ಷೆ ಮನೆಯಪಂಡ ಶೀಲಾ ಬೋಪಣ್ಣ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ನಿರ್ದೇಶಕ ಗುರುಸ್ವಾಮಿ, ಮಿಟ್ಟುಸೋಮಯ್ಯ ಉಪಸ್ಥಿತರಿದ್ದರು.