ಕೋಟೆ ಮತ್ತು ನಾಲ್ನಾಡ್ ಅರಮನೆಯಲ್ಲಿ ಸಿಎನ್‌ಸಿ ಯಿಂದ “ಪತ್ತಲೋದಿ” ಪ್ರಾರ್ಥನೆ, ಗೌರವಾರ್ಪಣೆ

26/10/2021

ಮಡಿಕೇರಿ ಅ.26 : ಕೊಡಗಿನ “ಪತ್ತಲೋದಿ” ದಿನದ ಪ್ರಯುಕ್ತ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಮಡಿಕೇರಿಯ ಕೋಟೆ ಮತ್ತು ನಾಲ್ನಾಡ್ ಅರಮನೆ ಆವರಣದಲ್ಲಿ ಕೆಳದಿ ರಾಜ ಪರಿವಾರದಿಂದ ಹತ್ಯೆಯಾದ ಕೊಡವ ಪೂರ್ವಿಕರಿಗೆ ನೈವೇದ್ಯ ಮತ್ತು ಗೌರವಾರ್ಪಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಮಾತನಾಡಿ “ಪತ್ತಲೋದಿ” ಯಂದು ಪೂರ್ವಿಕರನ್ನು ಸಂಸ್ಮರಣೆ ಮಾಡುವ ಪರಂಪರೆ ಕೊಡವ ಬುಡಕಟ್ಟು ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿದೆ ಎಂದರು. 1633ರಿಂದ 1834ರ ವರೆಗೆ ಕೊಡಗನ್ನಾಳಿದ ಹೊರ ಪ್ರದೇಶದ ಇಕ್ಕೇರಿ ಸಂಸ್ಥಾನದ ಕೆಳದಿ ರಾಜವಂಶ ತಮ್ಮ ಧಮನಕಾರಿ ಆಳ್ವಿಕೆಯಡಿ ನಿರಂತರವಾಗಿ ಆದಿಮಸಂಜಾತ ಬುಡಕಟ್ಟು ಕೊಡವರನ್ನು ಹತ್ಯೆ ಮಾಡಲಾಗಿದೆ. ಅಧಿಕಾರದ ಗದ್ದುಗೆ ಏರಲು ವೀರ ಕೊಡವರನ್ನು ಬಳಸಿಕೊಂಡು ನಂತರ ಬಲಿಷ್ಠ ಕೊಡವರಿಂದಲೇ ಸವಾಲು ಎದುರಾಗಲಿದೆ ಎನ್ನುವ ಸಂಶಯದಿoದ ಕೊಡವರನ್ನು ಬಲಿಪೀಠಕ್ಕೆ ಕಳುಹಿಸಲಾಯಿತು ಎಂದು ಬೇಸರ ವ್ಯಕ್ತಪಡಿಸಿದರು.
ದೇವಾಟ್ ಪರಂಬ್ ಹತ್ಯಾಕಾಂಡ ಕೂಡ ಈ ದ್ರೋಹಿ ಕೆಳದಿ ರಾಜಪರಿವಾರಕ್ಕೆ ನೀಡಿದ ಸ್ವಾಮಿ ನಿಷ್ಠೆಗೆ ಕೊಡವರು ತೆತ್ತ ಬಹುದೊಡ್ಡ ಬೆಲೆಯಾಗಿದೆ. ಕೃತಘ್ನ ರಾಜನನ್ನು ರಕ್ಷಿಸಿದ ಏಕೈಕ ಕಾರಣಕ್ಕಾಗಿ ಕೊಡವರು ಟಿಪ್ಪುವಿನ ಕೆಂಗಣ್ಣಿಗೆ ಗುರಿಯಾಗಬೇಕಾಯಿತು ಎಂದರು.
ಕೊಡವರ ಬದುಕಿಗೆ ಅಪ್ಪಳಿಸಿದ ಈ ದುರಂತವನ್ನು ಎಂದೆoದಿಗೂ ಮರೆಯಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಕೊಡವ ಪರಂಪರೆಯoತೆ “ಪತ್ತಲೋದಿ”ಯಂದು ನತದೃಷ್ಟ ಪೂರ್ವಿಕರ ಸಂಸ್ಮರಣೆಯನ್ನು ಮಾಡಿ ಕೊಡವ ಲ್ಯಾಂಡ್ ಸ್ವಾಯತ್ತತೆ, ಕೊಡವ ಬುಡಕಟ್ಟಿಗೆ ಎಸ್ಟಿ ಟ್ಯಾಗ್ ಮಾನ್ಯತೆ ಹಾಗೂ ರಾಜ್ಯಾಂಗ ಖಾತ್ರಿಗಾಗಿ ನಡೆಸುತ್ತಿರುವ ಹೋರಾಟದ ಯಶಸ್ಸಿಗಾಗಿ ಪ್ರಾರ್ಥಿಸಲಾಯಿತು ಎಂದು ತಿಳಿಸಿದರು.
ಸಿಎನ್‌ಸಿ ಪ್ರಮುಖರಾದ ಕಲಿಯಂಡ ಪ್ರಕಾಶ್, ಅರೆಯಡ ಗಿರೀಶ್, ಪುಲ್ಲೇರ ಕಾಳಪ್ಪ, ಅಪ್ಪಚ್ಚೀರ ನಾಣಯ್ಯ, ಬಾಚಮಂಡ ರಾಜ ಪೂವಣ್ಣ, ಅಪ್ಪಾರಂಡ ಶ್ರೀನಿವಾಸ್, ಕಾಟುಮಣಿಯಂಡ ಉಮೇಶ್, ಚಂಬoಡ ಜನತ್, ಪುದಿಯೊಕ್ಕಡ ಕಾಶಿ, ಪುಟ್ಟಿಚಂಡ ಡಾನ್, ಮಣುವಟ್ಟೀರ ಚಿಣ್ಣಪ್ಪ, ಬೇಪಡಿಯಂಡ ದಿನು, ತೆನ್ನೀರ ಮೈನ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.