ಹಾಗಲಕಾಯಿಯ ಔಷಧಿಯ ಗುಣಗಳು

03/11/2021

ಹಾಗಲಕಾಯಿ ಕಹಿ ಕಹಿಯಾಗಿರುವುದರಿಂದ ಬಹುತೇಕರಿಗೆ ಇದು ಇಷ್ಟವಾಗದ ತರಕಾರಿ. ಹಾಗಲಕಾಯಿ ಯಥೇಚ್ಚವಾದ ಔಷಧಿಗಳ ಗುಣಗಳ್ಳುಳ್ಳ ತರಕಾರಿಯಾಗಿದ್ದು, ಜೀರ್ಣಕ್ರಿಯೆಗೆ ಸಹಕಾರಿ, ಲಾಡಿಹುಳ ನಿರೋಧಕ, ಮಲೇರಿಯಾ ನಿರೋಧಕ, ಮಧುಮೇಹಕ್ಕೆ ಒಳ್ಳೆಯದು.

ಇಷ್ಟೇಲ್ಲಾ ಪ್ರಯೋಜನಗಳಿದ್ದರು, ವಾಸ್ತವವಾಗಿ ಹಾಗಲಕಾಯಿಯನ್ನು ಸೇವಿಸಲು ಬಹಳಷ್ಟು ಮಂದಿ ಹಿಂದೇಟು ಹಾಕುತ್ತಾರೆ. ಕಹಿ ಕಹಿಯಾಗಿರುವ ಹಾಗಲಕಾಯಿಯ ರಸವು ಕಬ್ಬಿಣ, ಮೆಗ್ನೀಷಿಯಂ ಮತ್ತು ವಿಟಮಿನ್ ಗಳಿಂದ ಸಮೃದ್ಧವಾಗಿದೆ. ಹಾಗಲಕಾಯಿ ಫೈಬರ್ ನ ಅತ್ಯುತ್ತಮವಾದ ಮೂಲವಾಗಿದೆ. ಇದು ಪಾಲಕ ಸೊಪ್ಪಿಗೆ ಹೋಲಿಸಿದರೆ ಅದರ ಎರಡು ಪಟ್ಟು ಕ್ಯಾಲ್ಸಿಯಂ ಹೊಂದಿದೆ.

ಇದು ಉತ್ಕರ್ಷಣ ನಿರೋಧಕ, ಫ್ಲೇವನಾಯ್ಡ್, ಇತರ ಪಾಲಿಫಿನಾಲ್ ಸಂಯುಕ್ತಗಳ ಸಮೃದ್ಧವಾದ ಮೂಲವಾಗಿದೆ. ಮುಖ್ಯವಾಗಿ ಹಾಗಲಕಾಯಿ ಜ್ಯೂಸ್ ಸೇವಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.

ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಣಗೊಳಿಸಲು ಹಾಗಲಕಾಯಿ ಜ್ಯೂಸ್ ಸಹಾಯ ಮಾಡುತ್ತದೆ. ಇತ್ತೀಚೆಗೆ ಮಧುಮೇಹಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ದೊಡ್ಡವರು ಚಿಕ್ಕವರು ಎಂಬ ಯಾವುದೇ ಭೇದ ಭಾವವಿಲ್ಲದೇ, ಮಧುಮೇಹಕ್ಕೆ ಬಹು ಬೇಗ ತುತ್ತಾಗುತ್ತಿದ್ದಾರೆ. ಮುಖ್ಯವಾಗಿ ಹಾಗಲಕಾಯಿಯು ಪಿ ಇನ್ಸುಲಿನ್ ಎಂಬ ಸಂಯುಕ್ತವನ್ನು ಹೊಂದಿದ್ದು, ಇದು ನೈಸರ್ಗಿಕವಾಗಿಯೇ ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತದೆ.

ಹಾಗಲಕಾಯಿಯನ್ನು ನಿಯಮಿತವಾಗಿ ಸೇವಿಸಿದಾಗ ಟೈಪ್ ೨ ಮಧುಮೇಹದಿಂದ ಬಳಲುತ್ತಿರುವ ರೋಗಿಗಳಲ್ಲಿನ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಗಮನಾರ್ಹವಾಗಿ ಕಡಿಮೆ ಮಾಡಿಕೊಳ್ಳಬಹುದು. ಇದು ಟೈಪ್ ೧ ಮಧುಮೇಹಿಗಳಿಗೂ ಕೂಡ ಪರಿಣಾಮಕಾರಿಯಾಗಿದೆ.

  • ಬಹುತೇಕರ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವು ಹೆಚ್ಚಾಗಿರುತ್ತದೆ. ಅಂತಹವರು ಸುಲಭವಾಗಿ ದೊರೆಯುವ ಹಾಗಲಕಾಯಿಯ ಜ್ಯೂಸ್ ಸೇವಿಸುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸಿಕೊಳ್ಳಬಹುದು.
  • ಹಾಗಲಕಾಯಿ ಜ್ಯೂಸ್ ವಿಟಮಿನ್ ಎ ಮತ್ತು ಸಿ ಸಂಯುಕ್ತವಿದ್ದು, ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ. ಇದು ಆಕಾಲಿಕವಾಗಿ ಕಂಡುಬರುವ ಚರ್ಮದ ವಯಸ್ಸನ್ನು ತಡೆಯುವುದಲ್ಲದೇ, ತ್ವಚೆಯ ಮೇಲಿನ ಸುಕ್ಕುಗಳನ್ನು ಕೂಡ ಕಡಿಮೆ ಮಾಡುತ್ತದೆ.
  • ಅನೇಕ ಚರ್ಮ ಸಮಸ್ಯೆಗಳಾದ, ಎಗ್ಜಿಮಾ ಮತ್ತು ಸೋರಿಯಾಸಿಸ್ ಗಳಿಗು ಸಹಾಯಕವಾಗಿದೆ, ಮೊಡವೆ ಪೀಡಿತ ತ್ವಚೆಯನ್ನು ಆರೋಗ್ಯಕರವಾಗಿಸುತ್ತದೆ, ಹಾನಿಕಾರಕವಾದ ಸೂರ್ಯನ ಯು.ವಿ ಕಿರಣಗಳಿಂದ ರಕ್ಷಿಸುತ್ತದೆ,ವಿಟಮಿನ್ ಎ ಮತ್ತು ಸಿ ಇರುವುದರಿಂದ ತ್ವಚೆಗೆ ಒಳಗಿನಿಂದ ಹೊಳಪನ್ನು ನೀಡುತ್ತದೆ, ಹಾಗಲಕಾಯಿಯ ರಸವನ್ನು ನಿಮ್ಮ ನೆತ್ತಿಗೆ ಹಚ್ಚುವುದರಿಂದ ಕೂದಲು ಉದುರುವುದನ್ನು ಕಡಿಮೆ ಮಾಡಿ, ತಲೆಹೊಟ್ಟು ನಿವಾರಿಸುತ್ತದೆ.
  • ಹಾಗಲಕಾಯಿಯಲ್ಲಿ ಕಡಿಮೆ ಕ್ಯಾಲೋರಿ, ಕೊಬ್ಬು ಮತ್ತು ಕಾರ್ಬೋಹೈಡ್ರೇಟ್ಗಳು ಇವೆ . ಹಾಗಾಗಿ ಇದರಿಂದ ನಿಮ್ಮ ದೇಹದ ತೂಕವನ್ನು ಸುಲಭವಾಗಿ ಕಡಿಮೆ ಮಾಡಿಕೊಳ್ಳಬಹುದು. ಒಂದು ವರದಿಯ ಪ್ರಕಾರ, ಹಾಗಲಕಾಯಿಯ ಸಾರಗಳು ಮಾನವನ ಕೊಬ್ಬಿನ ಕೋಶಗಳನ್ನು ಸ್ಥಳಾಂತರಿಸುವಲ್ಲಿ ಸಹಾಯ ಮಾಡುತ್ತದೆ ಮತ್ತು ಹೊಸ ಕೊಬ್ಬಿನ ಕೋಶಗಳ ರಚನೆಗೆ ಹಾಗು ಬೆಳವಣಿಗೆಯನ್ನು ತಡೆಯುತ್ತದೆ. ಹಾಗಲಕಾಯಿಯು ಸ್ಥೂಲಕಾಯಕ್ಕೆ ಚಿಕಿತ್ಸೆ ನೀಡುವ ನೈಸರ್ಗಿಕವಾದ ಚಿಕಿತ್ಸೆಯಾಗಿದೆ.