ಧುಮ್ಮಿಕ್ಕಿ ಹರಿಯುತ್ತಿರುವ ಬುರುಡೆ ಜಲಪಾತ

04/11/2021

ಬುರುಡೆ ಜಲಪಾತ ಅಥವಾ ಬುರುಡೆ ಜೋಗ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನಲ್ಲಿರುವ ಒಂದು ಜಲಪಾತ. ಸುಮಾರು 90 ಮೀ. ಎತ್ತರದಿಂದ ಧುಮುಕುತ್ತದೆ. ಇಲ್ಲಿ ‘ಇಳ್ಳಿಮನೆ’ ಎಂಬ ಹಳ್ಳಿಯಿರುವುದರಿಂದ ಇದಕ್ಕೆ ‘ಇಳ್ಳಿಮನೆ ಜಲಪಾತ’ ಎಂದೂ ಕರೆಯುತ್ತಾರೆ. ಇಳ್ಳಿಮನೆ ಹೊಳೆಯಿಂದ ಹರಿದು ಬಂದ ನೀರು ಇಲ್ಲಿ ಧುಮ್ಮಿಕ್ಕಿ ನಂತರ ಅಘನಾಶಿನಿ ನದಿ ಸೇರುತ್ತದೆ.

ಭೇಟಿಯ ಕಾಲ :
ಈ ಜಲಪಾತಕ್ಕೆ ಹೋಗಲು ಸೂಕ್ತ ಕಾಲವೆಂದರೆ ಚಳಿಗಾಲ ಮತ್ತು ಬೇಸಿಗೆಯ ಆರಂಭ ಕಾಲ. ಮಳೆಗಾಲದಲ್ಲಿ ಕಣಿವೆಯನ್ನು ದಾಟುವುದು ಅಸಾಧ್ಯ. ಅಂದರೆ ಈ ಫಾಲ್ಸ್ ನೋಡಲು ನವಂಬರ್‌ನಿಂದ ಮೇ ತಿಂಗಳವರೆಗೆ ಮಾತ್ರ ಸಾಧ್ಯ. ಬೇಸಿಗೆಕಾಲದಲ್ಲಿ ಪ್ರವಾಸಿಗರು ಇಲ್ಲಿ ಚಾರಣ ನಡೆಸುವುದಕ್ಕೆ ಅನುಕೂಲವಾಗುವಂತೆ ಸಣ್ಣ ನಾಲೆಯೂ ಇದೆ.

ಮಾರ್ಗ
ಸಿದ್ದಾಪುರದಿಂದ ಸುಮಾರು 28 ಕಿಲೋಮೀಟರ್ ದೂರದಲ್ಲಿದೆ. ಸಿದ್ಧಾಪುರ-ಕುಮಟಾ ಮಾರ್ಗದ ಮಧ್ಯೆ ಅಳ್ಳಿಮಕ್ಕಿ ಎಂಬಲ್ಲಿಂದ ಮಾರ್ಗ ಬದಲಿಸಿಕೊಂಡು ಸುಮಾರು 3 ಕಿ.ಮೀ. ಬುದಗಿತ್ತಿ ಎಂಬ ಹಳ್ಳಿಯವರೆಗೆ ಮಾರ್ಗ ಸರಿಯಾಗಿದ್ದು ವಾಹನದಲ್ಲಿ ಇಲ್ಲಿಯವರೆಗೂ ಹೋಗಬಹುದು.  (ಅಥವಾ ಸಿದ್ದಾಪುರದಿಂದ ಹೊರಟು ಕ್ಯಾದಗಿ ಊರು ತಲುಪಿ ನಂತರ ಒಳಗೆ ಬೂದಗಿತ್ತಿ ಊರನ್ನು ತಲುಪಬೇಕು). ಅನಂತರ ಅಲ್ಲಿಂದ ಕಾಲುನಡಿಗೆಯಲ್ಲಿ ಹೋಗಬೇಕು.