ಸುಂದರ ಪರ್ವತ ಶ್ರೇಣಿಗಳನ್ನು ಒಳಗೊಂಡಿರುವ ಕುದುರೆಮುಖ

08/11/2021

ಕುದುರೆಯ ಮುಖ’ದ ಹಾಗೆ ಕಾಣಿಸುವ ಪರ್ವತ ಶ್ರೇಣಿಯೇ ‘ಕುದುರೆ ಮುಖ’. ಈ ಸುಂದರ ಗಿರಿಧಾಮ, ಚಿಕ್ಕಮಗಳೂರುಗೆ ದಕ್ಷಿಣ ಪಶ್ಚಿಮದಿಕ್ಕಿನಲ್ಲಿ 95  ಕಿ.ಮೀ ದೂರದಲ್ಲಿದೆ. ‘ಅರಬ್ಬೀ ಸಮುದ್ರ’ದೂರದಲ್ಲಿ ಕಾಣಿಸುತ್ತದೆ. ಈ ವಿಶಾಲ ಹಾಗೂ ಅಗಲವಾಗಿ ಹಬ್ಬಿದ ಸುಂದರವಾದ ಪರ್ವತ ಶ್ರೇಣಿಗಳು, ಗುಹೆಗಳು, ಕಂದಕ, ಹಳ್ಳಕೊಳ್ಳ ಮತ್ತು ಚಿಕ್ಕದೊಡ್ಡ ಬೆಟ್ಟಗಳಿಂದ ಕೂಡಿವೆ. ಕಿರಿದಾದ ಬೆಟ್ಟಗಳ ಕಾಡಿನ ಕವಲು ದಾರಿಯಲ್ಲಿ ನಡೆದೇ ಸಾಗಿದರೆ, ಪಕ್ಕದಲ್ಲಿ ಜುಳುಜುಳು ಹರಿಯುವ ಶುದ್ಧ ತಿಳಿನೀರಿನ ಝರಿಗಳು, ಎಲ್ಲೆಡೆ ಕಾಣುವ ಹಸಿರು ಹುಲ್ಲು ಗಿಡಮರಗಳು, ಚಿಲಿಪಿಲಿ ಕೂಗುವ ಪಕ್ಷಿ ಸಂಕುಲ. ಇನ್ನೂ ಕೆಲವು ಜಾಗಗಳು ‘ಪರ್ಯಟಕರ ಪುಸ್ತಕ’ಗಳಲ್ಲಿ ದಾಖಲಾಗದೆ ಇರುವ ಪರಿಸರಗಳೂ ಇವೆ. ಹೆಸರು ಗೊತ್ತಿಲ್ಲದ್ದ ಅದೆಷ್ಟೋ ಗಿಡಮರ ಬಳ್ಳಿಗಳು,ಹೂ-ಕಾಯಿಗಳು. ಬಣ್ಣ ಬಣ್ಣದ ನೆಲದ ಮಣ್ಣುಗಳು ಇಲ್ಲಿನ ವಿಶೇಷಗಳಲ್ಲೊಂದು.

ಕುದುರೆ ಮುಖ ನ್ಯಾಷನಲ್ ಪಾರ್ಕ್’
ಸುಮಾರು ೬೦೦ ಚ.ಮೀ ವಿಸ್ತೀರ್ಣದಲ್ಲಿ ಹಬ್ಬಿರುವ ಈ ‘ರಾಷ್ಟ್ರೀಯ ಉದ್ಯಾನ’, ‘ನಿತ್ಯ ಹರಿದ್ವರ್ಣದ ಕಾಡಿ’ಗೆ ಹೆಸರುವಾಸಿಯಾದ ಜಾಗವಾಗಿದೆ. ಪಶ್ಚಿಮ ಘಟ್ಟಗಳ ಹಚ್ಚಹಸಿರಿನ ಹುಲ್ಲಿನ ಇಳಿಜಾರಿನಲ್ಲಿ ಹಾಗೇ ಮೈಲುಗಟ್ಟಲೆ ದೂರ ಹಬ್ಬಿರುವ ಈ ಗಿರಿಶಿಖರಗಳು, ನಿತ್ಯಹರಿದ್ವರ್ಣದ ಕಾಡುಗಳಿಗೆ ಹೆಸರುವಾಸಿ. ಒಮ್ಮೊಮ್ಮೆ ಹವೆಯು ಹೆಚ್ಚು ಬಿಸಿಯಾಗಿರುವುದೂ ಉಂಟು. ಕರ್ನಾಟಕದ ಅತ್ಯಂತ ಪ್ರಮುಖ ಪರ್ಯಟಕರ ಪಟ್ಟಿಯಲ್ಲಿ ಇದೂ ಒಂದಾಗಿದೆ. ಈ ತಾಣದಲ್ಲಿ ಹುಲಿಗಳನ್ನು ಸಂರಕ್ಷಿಸುವ ಅಭಿಯಾನ (Global Tiger Conservation Priority-I,) ವನ್ನು ವೀಕ್ಷಿಸಬಹುದು. ಈ ‘ಅಭಯಾರಣ್ಯ’ವನ್ನು ರಕ್ಷಣೆಯ ಪಟ್ಟಿಯಲ್ಲಿ ದಾಖಲುಮಾಡಿದ್ದಾರೆ. ಸನ್, ೧೯೮೭ ರಲ್ಲಿ ರಚಿತವಾದ ಈ ಅರಣ್ಯ, ಅನೇಕ ಸಸ್ತನಿಗಳಿಗೆ, ಕ್ರೂರ ಕಾಡುಪ್ರಾಣಿಗಳಿಗೆ, ಕಾಡು ನಾಯಿಗಳು, ಚಿರತೆಗಳು, ಮತ್ತು ಹುಲಿಗಳ ಸಂರಕ್ಷಣೆಗೆ ವಿಧೇಯಕವನ್ನು ಹೊಂದಿದ ಅರಣ್ಯಧಾಮವಾಗಿ ಪರಿಗಣಿಸಲ್ಪಟ್ಟಿದೆ. ಇದಲ್ಲದೆ, ಈ ಅರಣ್ಯದಲ್ಲಿ ಸ್ವಾಭಾವಿಕವಾಗಿಯೇ ಜೀವಿಸುತ್ತಿರುವ ‘ಲಂಗೂರ್ ವಾನರ’ಗಳಿಗೆ, ‘ಕಾಡುಹಂದಿ’ಗಳಿಗೆ, ‘ಸಾಂಬಾರ್’ ಹಾಗೂ ಸಿಂಹದ ಬಾಲವಿರುವ (macaque) ಗಳಿಗೆ ಮನೆಯಾಗಿದೆ.

ಚಾರಣ ಸ್ಥಳಗಳು ಅಥವಾ ಟ್ರೆಕ್ ಮಾಡಲು ಅನುಕೂಲವಾದ ವ್ಯವಸ್ಥೆ 
‘ಕುದುರೆ ಮುಖ ನ್ಯಾಷನಲ್ ಪಾರ್ಕ್’ ನಲ್ಲಿ ೧೩ ಚಾರಣ ಸ್ಥಳಗಳನ್ನು ಗುರುತಿಸಲಾಗಿದೆ. ಹತ್ತಿರದಲ್ಲೇ ಈ ಸ್ಥಳಗಳಿಗೆ ಹೋಗಿಬರಲು ಅನುಕೂಲವಾಗುವಂತೆ, ‘ತಂಗುದಾಣ’ಗಳನ್ನು (forest rest house)
ನಿರ್ಮಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾದದ್ದು, ‘ಕೆರೆಕಟ್ಟೆ’, ಹಾಗೂ ‘ನವೂರ್ ಅರಣ್ಯದ ರೆಸ್ಟ್ ಹೌಸ್’ ಗಳು. ಅವು ‘ಬೆಳ್ತಂಗಡಿ’ಯ ಹತ್ತಿರವಿದ್ದು ‘ಚಾರಣಪ್ರಿಯ’ರಿಗೆ ಮುದಕೊಡುವ ತಾಣಗಳಾಗಿವೆ.