ಅಯೋಡಿನ್ ಕೊರತೆಯಿಂದ ಉಂಟಾಗುವ ಸಮಸ್ಯೆಗಳು

10/11/2021

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲ್ಲಾಖೆ ಮತ್ತು ಜಿಲ್ಲಾ ಸರ್ವೇಕ್ಷಣಾ ಘಟಕ ಇವರ ವತಿಯಿಂದ ಜಿಲ್ಲೆಯಲ್ಲಿ ರಾಷ್ಟ್ರೀಯ ಅಯೋಡಿನ್ ಕೊರತೆ ನ್ಯೂನತೆ ನಿಯಂತ್ರಣ ದಿನ ಹಾಗೂ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಆನಂದ್ ಅವರು ತಿಳಿಸಿದ್ದಾರೆ.
ದಿನನಿತ್ಯದ ಆಹಾರದಲ್ಲಿ ಅಯೋಡಿನ್ ಯುಕ್ತ ಉಪ್ಪನ್ನೇ ಬಳಸಬೇಕು. ಇದರಿಂದ ಅಯೋಡಿನ್ ಕೊರತೆಯ ನ್ಯೂನತೆಗಳನ್ನು ತಡೆಗಟ್ಟಬಹುದು ಎಂದರು.
ಅಯೋಡಿನ್ ಕೊರತೆಯಿಂದ ಮಕ್ಕಳಲ್ಲಿ ಬುದ್ದಿ ಮಾಂದ್ಯತೆ, ಕಲಿಕೆಯಲ್ಲಿ ಹಿಂದುಳಿಯುವಿಕೆ, ದೈಹಿಕ ಮತ್ತು ಮಾನಸಿಕ ವಿಕಲತೆ, ಕುಂಠಿತ ಬೆಳವಣಿಗೆ, ಕಿವುಡು ಮತ್ತು ಮೂಕತನ, ಮೆಳ್ಳೆಗಣ್ಣು ಮತ್ತು ನಡಿಗೆಯಲ್ಲಿ ಲೋಪದೋಷಗಳು ಕಂಡುಬರುತ್ತದೆ ಎಂದು ಅವರು ತಿಳಿಸಿದ್ದಾರೆ.
ವಯಸ್ಕರಲ್ಲಿ ನಿಶ್ಯಕ್ತಿ, ಕಾರ್ಯನಿರ್ವಹಣೆಯ ವೈಪಲ್ಯ, ಗಳಗಂಡ ರೋಗ ಕಂಡು ಬರುತ್ತದೆ. ಗರ್ಭಿಣಿಯರಲ್ಲಿ ಗರ್ಭಪಾತ, ಸತ್ತು ಹುಟ್ಟುವ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳವಾಗಲಿದೆ. ಅಯೋಡಿನ್‍ಯುಕ್ತ ಉಪ್ಪು ಮಕ್ಕಳ ಹಾಗೂ ಕುಟುಂಬದ ಆರೋಗ್ಯ ಸಂರಕ್ಷಕ, ಕತ್ತಿನ ಗಂಟು ಅದೃಷ್ಟದ ಗಂಟಲ್ಲ, ಗಳಗಂಡ ರೋಗದ ನಂಟು. ಹೆಚ್ಚಿನ ಮಾಹಿತಿಗೆ 24*7 ಉಚಿತ ಆರೋಗ್ಯ ಸಹಾಯವಾಣಿ 104 ಕ್ಕೆ ಕರೆ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.