ಚೆಟ್ಟಳ್ಳಿ : ಪೊಲೀಸ್ ಸಿಬ್ಬಂದಿ ವಿರುದ್ಧ ಅಸಮಾಧಾನ : ಸೂಕ್ತ ಕ್ರಮಕ್ಕಾಗಿ ಒತ್ತಾಯ

21/11/2021

ಚೆಟ್ಟಳ್ಳಿ ನ.21 : ಪುತ್ತರಿ ಹಬ್ಬದ ದಿನ ರಾತ್ರಿ ಚೆಟ್ಟಳ್ಳಿಯ ಪುತ್ತರಿರ ಪಪ್ಪು ತಿಮ್ಮಯ್ಯ ಎಂಬುವವರ ಮನೆಗೆ ಪೋಲಿಸ್ ಸಿಬ್ಬಂದಿಯೊಬ್ಬರು ಪ್ರವೇಶ ಮಾಡಿ ಹಬ್ಬದ ಸಂಭ್ರಮಕ್ಕೆ ತಡೆಯೊಡ್ಡಿದ್ದಲ್ಲದೆ ಅವಾಚ್ಯ ಶಬ್ಧ ಬಳಸಿದ್ದಾರೆ ಎಂದು ಆರೋಪಿಸಿ ಮತ್ತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಯುನೈಟೆಡ್ ಕೊಡವ ಆರ್ಗನೈಸೇಶನ್ ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಚೆಟ್ಟಳ್ಳಿ ಪೋಲಿಸ್ ಠಾಣೆಯಲ್ಲಿ ದೂರು ಸಲ್ಲಿಸಿದರು.
ಪೋಲಿಸ್ ಸಿಬ್ಬಂದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಕೊಡಗಿನ ಸಂಸ್ಕೃತಿಯನ್ನು ಅರಿತು ಸೌಜನ್ಯದಿಂದ ವರ್ತಿಸುವಂತೆ ಎಚ್ಚರಿಕೆ ನೀಡಿದರು. ಯುಕೋ ಸಂಘಟನೆಯ ಸಂಚಾಲಕ ಕೊಕ್ಕಲೆಮಾಡ ಮಂಜುಚಿಣ್ಣಪ್ಪ ಹಾಗೂ ಸಾಮಾಜಿಕ ಕಾರ್ಯಕರ್ತ ಮಾದೇಟಿರ ಪಿ.ತಿಮ್ಮಯ್ಯ ಮಾತನಾಡಿ ಪೊಲೀಸ್ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಮಡಿಕೇರಿ ಗ್ರಾಮಾಂತರ ಠಾಣೆಯ ವೃತ್ತ ನಿರೀಕ್ಷಕ ರವಿಕಿರಣ್ ಸೂಕ್ತ ಕ್ರಮದ ಭರವಸೆ ನೀಡಿದರು.
ಚೆಟ್ಟಳ್ಳಿ ಠಾಣಾ ಎಎಸ್ ಐ ಶ್ರೀನಿವಾಸ್ ಗೆ ದೂರು ಸಲ್ಲಿಸಲಾಯಿತು. ಕ್ಯಾಪ್ಟನ್ ಮುಳ್ಳಂಡ ತಿಮ್ಮಯ್ಯ, ಪುತ್ತರಿರ ರಾಬಿನ್ ಚಂಗಪ್ಪ, ಬಟ್ಟೀರ ಕಾಳಪ್ಪ, ಚೆಟ್ಟಳ್ಳಿ ಕೊಡವ ಸಮಾಜದ ಅಧ್ಯಕ್ಷ ಮುಳ್ಳಂಡ ರತ್ತುಚಂಗಪ್ಪ, ಮಾಹಿತಿ ಹಕ್ಕು ಕಾರ್ಯಕರ್ತ ಪುತ್ತರೀರ ದೇವಯ್ಯ, ವಕೀಲ ನೆಲ್ಲಮಕ್ಕಡ ಮಾದಯ್ಯ, ಚೆಟ್ಪಳ್ಳಿ ಪಂಚಾಯಿತಿ ಸದಸ್ಯರುಗಳಾದ ತೀರ್ಥಕುಮಾರ್, ಮುಳ್ಳಂಡ ಅಂಜನ್ನ್ ಮುತ್ತಪ್ಪ, ಕೊಳಂಬೆ ವಿನುಕುಮಾರ್, ಪೇರಿಯನ ಘನಶ್ಯಾಂ, ಕೆಚ್ಚೇಟ್ಟಿರ ಡಿಕ್ಕಿ ಅಪ್ಪಯ್ಯ, ಪತ್ರಕರ್ತ ಪುತ್ತರಿರ ಕರುಣ್ ಕಾಳಯ್ಯ ಮತ್ತಿತರರು ಈ ಸಂದರ್ಭ ಹಾಜರಿದ್ದರು.