ಮಡಿಕೇರಿ : ರೈತರ ಹಿತ ಕಾಯಲು ಕೇಂದ್ರ ಸರಕಾರ ಬದ್ಧ : ಸಚಿವೆ ಶೋಭಾ ಕರಂದ್ಲಾಜೆ ಭರವಸೆ

ಮಡಿಕೇರಿ ನ.22 : ಕೃಷಿಗೆ ಸಂಬoಧಿಸಿದoತೆ ರೈತರ ಹಿತ ಕಾಯಲು ಅಗತ್ಯವಿರುವ ಕಾನೂನುಗಳನ್ನು ರೂಪಿಸಲು ರಾಜ್ಯ ಸರಕಾರಗಳಿಗೆ ಸಂಪೂರ್ಣ ಸ್ವಾತಂತ್ರ್ಯವಿದೆ. ಕೇಂದ್ರ ಸರಕಾರ ಕೂಡ ಕ್ರಮ ಕೈಗೊಳ್ಳಲಿದೆ ಎಂದು ಕೇಂದ್ರ ಕೃಷಿ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಭರವಸೆ ನೀಡಿದ್ದಾರೆ.
ಮಡಿಕೇರಿಯಲ್ಲಿ ಬಿಜೆಪಿಯ ಜನಸ್ವರಾಜ್ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಮೂರು ಕೃಷಿ ಮಸೂದೆಗಳನ್ನು ಸರಕಾರ ವಾಪಾಸು ಪಡೆದಿದ್ದರೂ, ರೈತರ ಹಿತ ಕಾಯಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೇಂದ್ರ ಸರಕಾರ ಕೈಗೊಳ್ಳಲಿದೆ ಎಂದು ಹೇಳಿದರು.
ಕೃಷಿ ಕಾಯ್ದೆ ರೂಪಿಸುವುದು 30 ವರ್ಷಗಳ ಹಿಂದಿನ ಬೇಡಿಕೆಯಾಗಿದ್ದು, ಬೇರೆಬೇರೆ ಸರಕಾರಗಳು ಅಧಿಕಾರದಲ್ಲಿದ್ದಾಗಲೂ ಈ ಬಗ್ಗೆ ಚರ್ಚೆಯಾಗಿದೆ. ಅಲ್ಲದೆ ಬೇರೆಬೇರೆ ಸಮಿತಿಗಳು ನೀಡಿದ ವರದಿಯ ಆಧಾರಲ್ಲೇ ಕಾಯ್ದೆಯನ್ನು ರೂಪಿಸಲಾಗಿದೆ. ಆದರೆ ಕಾಯ್ದೆಯ ಕುರಿತು ಜನತೆಗೆ ಮನವರಿಕೆ ಮಾಡಿಕೊಡುವಲ್ಲಿ ಕೊರೋನಾ ಕಾರಣದಿಂದಾಗಿ ಸ್ವಲ್ಪ ಹಿನ್ನಡೆಯಾಯಿತು ಎಂದು ಶೋಭಾ ಕರಂದ್ಲಾಜೆ ಒಪ್ಪಿಕೊಂಡರು.
ಕೃಷಿ, ರಾಜ್ಯಗಳಿಗೆ ಸಂಬoಧಿಸಿದ ವಿಷಯವಾಗಿದ್ದು, ಆಯಾ ರಾಜ್ಯದ ರೈತರ ಹಿತ ಕಾಯಲು ಅಗತ್ಯವಿರುವ ಕಾನೂನುಗಳನ್ನು ರೂಪಿಸಲು ರಾಜ್ಯ ಸರಕಾರಗಳಿಗೆ ಸಂಪೂರ್ಣ ಸ್ವಾತಂತ್ರ್ಯವಿದೆ. ಕರ್ನಾಟಕದಲ್ಲೂ ರೈತ ಪರವಾದ ಬಿಜೆಪಿ ಸರಕಾರವಿದ್ದು, ರೈತರ ಹಿತ ಕಾಪಾಡಲು ಸರಕಾರ ಬದ್ಧವಾಗಿದೆ. ಅಲ್ಲದೆ ಇತರ ಬಿಜೆಪಿ ಆಡಳಿತದ ರಾಜ್ಯಗಳಲ್ಲೂ ರೈತರ ರಕ್ಷಣೆಗೆ ಅಗತ್ಯವಿರುವ ಕಾನೂನುಗಳನ್ನು ರೂಪಿಸಲು ಅವುಗಳು ಬದ್ಧವಾಗಿವೆ. ಅದರಂತೆ ಕೇಂದ್ರ ದರ ಸರಕಾರವೂ ರೈತರ ಹಿತ ರಕ್ಷಣೆಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಅವರು ನುಡಿದರು.