ಕಾಫಿ ಬೆಳೆಹಾನಿ : ಮರು ಸಮೀಕ್ಷೆಗೆ ಆದೇಶ : ಕೇಂದ್ರ ಸಚಿವರ ಭರವಸೆ

22/11/2021

ಮಡಿಕೇರಿ ನ.22 : ಕೊಡಗು ಸೇರಿದಂತೆ ರಾಜ್ಯದ ಕಾಫಿ ಬೆಳೆಯುವ ಜಿಲ್ಲೆಗಳಲ್ಲಿ ಈ ಬಾರಿ ಅಕಾಲಿಕ ಮಳೆ ಹಾಗೂ ಅತಿವೃಷ್ಟಿಯಿಂದಾಗಿ ಕಾಫಿ, ಅಡಿಕೆ ಹಾಗೂ ಭತ್ತದ ಬೆಳೆಗೆ ಭಾರೀ ಹಾನಿಯಾಗಿದೆ. ಈ ನಿಟ್ಟಿನಲ್ಲಿ ಕಾಫಿ ನಷ್ಟದ ಮರು ಸಮೀಕ್ಷೆ ನಡೆಸಿ ವರದಿ ನೀಡುವಂತೆ ವಾಣಿಜ್ಯ ಸಚಿವಾಲಯದ ಮೂಲಕ ಕಾಫಿ ಮಂಡಳಿಗೆ ಆದೇಶ ಕೊಡಿಸಲಾಗುವುದು ಎಂದು ಸಚಿವೆ ಶೋಭಾ ಕರಂದ್ಲಾಜೆ ಅವರು ಜನ ಸ್ವರಾಜ್ ಸಮಾವೇಶದಲ್ಲಿ ಭರವಸೆ ನೀಡಿದರು.
ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಸಚಿವರ ಗಮನಸೆಳೆದು, ಕಾಫಿ ಮಂಡಳಿ ಅಧಿಕಾರಿಗಳು ಸ್ಥಳ ಸಮೀಕ್ಷೆ ಮಾಡದೆ ಬೆಳೆಗಾರರೊಂದಿಗೆ ಉಡಾಫೆಯಿಂದ ವರ್ತಿಸುತ್ತಿದ್ದು, ಕಾಫಿ ಬೆಳೆ ಹಾನಿಯಾಗಿರುವ ಕೆಲವು ಗ್ರಾಮಗಳನ್ನೇ ಕೈಬಿಟ್ಟಿದ್ದಾರೆ. ಇದರಿಂದಾಗಿ ಕೊಡಗಿನಲ್ಲಿ ಬಹುತೇಕ ಕಾಫಿ ಬೆಳೆಗಾರರು ಪರಿಹಾರದಿಂದ ವಂಚಿತರಾಗುವ ಸಂಭವವಿದೆ ಎಂದು ಕಳವಳ ವ್ಯಕ್ತಪಡಿಸಿದರು. ಈ ಸಂಬಂಧ ಮರು ಸಮೀಕ್ಷೆಗೆ ಕೇಂದ್ರ ಸರಕಾರದಿಂದಲೇ ಆದೇಶ ಹೊರಡಿಸಬೇಕೆಂದು ಮನವಿ ಮಾಡಿದರು.