ಕಾಂಗ್ರೆಸ್ ಪಕ್ಷಕ್ಕೆ ಕೊಡಗಿನಲ್ಲಿ ಅಭ್ಯರ್ಥಿಗಳೇ ಇಲ್ಲ : ಶಾಸಕ ಅಪ್ಪಚ್ಚುರಂಜನ್ ಲೇವಡಿ

22/11/2021

ಮಡಿಕೇರಿ ನ.22 : ವಿಧಾನ ಪರಿಷತ್ ಚುನಾವಣೆಯಲ್ಲಿ ಹೊರ ಜಿಲ್ಲೆಯ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮುಂದಾಗಿರುವ ಕಾಂಗ್ರೆಸ್ ಪಕ್ಷಕ್ಕೆ, ಸ್ಥಳೀಯ ಅಭ್ಯರ್ಥಿಗಳೇ ಇಲ್ಲವೆಂದು ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಲೇವಡಿ ಮಾಡಿದ್ದಾರೆ.
ನಗರದಲ್ಲಿ ಬಿಜೆಪಿಯ ‘ಜನ ಸ್ವರಾಜ್’ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರಸ್ತುತ ಕಾಂಗ್ರೆಸ್ ಕಣಕ್ಕಿಳಿಸಲು ಮುಂದಾಗಿರುವ ಅಭ್ಯರ್ಥಿ ಕಾಂಗ್ರೆಸ್‌ನವರಾದರೆ, ಅವರ ತಂದೆ ಬಿಜೆಪಿಯಲ್ಲಿರುವವರಾಗಿದ್ದಾರೆ. ಇಂತಹವರನ್ನು ಜನ ನಂಬುವುದಿಲ್ಲವೆoದು ಹೇಳಿದರು.
ಪ್ರಸ್ತುತ ಕಾಂಗ್ರೆಸ್‌ಗೆ ಕೊಡಗಿನಲ್ಲಿ ವಿಧಾನ ಪರಿಷತ್ ಚುನಾವಣೆ ಎದುರಿಸಲು ಅಭ್ಯರ್ಥಿಯನ್ನು ‘ಇಂಪೋರ್ಟ್’ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದೊದಗಿದೆ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ ಮಾತನಾಡಿ, ಎಂಎಲ್‌ಸಿ ಚುನಾವನೆಯಲ್ಲಿ ಸುಜಾ ಕುಶಾಲಪ್ಪರ ಗೆಲುವು ನಿಶ್ಚಿತ. ಆದರೆ, ಇವರ ಪ್ರತಿಸ್ಪರ್ಧಿಯಾಗಿ ನಿಲ್ಲುವವರಿಗೆ ಕನಿಷ್ಟ ಠೇವಣಿಯೂ ದೊರಕದಂತೆ ಮಾಡುವ ಸವಾಲು ನಮ್ಮ ಮುಂದಿರುವುದಾಗಿ ತಿಳಿಸಿದರು.