ಮಡಿಕೇರಿಯಲ್ಲಿ ಜನಸ್ವರಾಜ್ ಸಮಾವೇಶ : ಜನರ ಋಣ ತೀರಿಸುವ ಕಾರ್ಯ ಮಾಡಿ : ಗ್ರಾ.ಪಂ ಪ್ರತಿನಿಧಿಗಳಿಗೆ ಸಚಿವ ಈಶ್ವರಪ್ಪ ಕಿವಿಮಾತು

22/11/2021

ಮಡಿಕೇರಿ ನ.22 : ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗ್ರಾಮೀಣಾಭಿವೃದ್ಧಿಗೆ ಒತ್ತು ನೀಡಿ, ಗ್ರಾಮಗಳ ಸರ್ವಾಂಗೀಣ ಪ್ರಗತಿಗೆ ಪೂರಕವಾದ ಯೋಜನೆಗಳಿಗೆ ಅಗತ್ಯ ನೆರವನ್ನು ಒದಗಿಸುತ್ತಿವೆ. ಗ್ರಾ.ಪಂ ಜನಪ್ರತಿನಿಧಿಗಳು ಇದರ ಸದುಪಯೋಗ ಪಡೆದು ಜನರ ಸಂಕಷ್ಟಗಳನ್ನು ಪರಿಹರಿಸುವ ಮೂಲಕ ಅವರ ಋಣ ತೀರಿಸಲು ಮುಂದಾಗಬೇಕೆoದು ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಕರೆ ನೀಡಿದ್ದಾರೆ.
ನಗರದ ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ನಡೆದ ಬಿಜೆಪಿಯ ‘ಜನಸ್ವರಾಜ್ ಸಮಾವೇಶ’ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೋದಿ ನೇತೃತ್ವದ ಸರ್ಕಾರ ಗ್ರಾಮೀಣ ಭಾಗದ ಜನರ ಸಂಕಷ್ಟಗಳಿಗೆ ಸ್ಪಂದಿಸಿ ಕುಡಿಯುವ ನೀರಿ, ರಸ್ತೆ, ವಿದ್ಯುತ್‌ಗೆ ಒತ್ತು ನೀಡಿ ಜನೋಪಯೋಗಿ ಯೋಜನೆಗಳನ್ನು ರೂಪಿಸಿದೆ. ಕೋವಿಡ್ ಸಂಕಷ್ಟದ ಅವಧಿಯಲ್ಲಿ ಮಾರಕ ರೋಗವನ್ನು ಹೋಗಲಾಡಿಸಲು ಮಹತ್ವದ ಹೆಜ್ಜೆಗಳನ್ನು ಇಡುವ ಮೂಲಕ ಜನಾನುರಾಗಿ ವ್ಯಕ್ತಿಯಾಗಿ ರೂಪು ಗೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಇಡೀ ವಿಶ್ವವೇ ಗುರುತಿಸಿರುವುದಾಗಿ ಮೆಚ್ಚುಗೆಯ ನುಡಿಗಳನ್ನಾಡಿದರು.
ಕೊಡಗಿನ ಬಿಜೆಪಿ ಮಂದಿ ‘ಹಿಂದುತ್ವದ ಸಿಂಹ’ಗಳೇ ಆಗಿರುವುದಾಗಿ ಮೆಚ್ಚುಗೆಯ ನುಡಿಗಳನ್ನಾಡಿ, ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸುಜಾ ಕುಶಾಲಪ್ಪರ ಗೆಲುವಿಗೆ ಪ್ರತಿಯೊಬ್ಬರು ಶ್ರಮಿಸುವಂತೆ ಕರೆ ನೀಡಿದರು.
::: 17 ಸ್ಥಾನಗಳಲ್ಲಿ ಗೆಲುವು :::
ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಮಾತನಾಡಿ, ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಕನಿಷ್ಟ 17 ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಪಕ್ಷ ಎಂಎಲ್‌ಸಿ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಬಹುತೇಕ ಪಂಚಾಯ್ತಿಗಳಲ್ಲಿ ಬಿಜೆಪಿ ಬೆಂಬಲಿತ ಸದಸ್ಯರುಗಳಿರುವುದರಿಂದ ಗೆಲುವು ಸುಲಭವಾಗಲಿದೆ ಎಂದರು.
ಮೀನುಗಾರಿಕಾ ಸಚಿವ ಅಂಗಾರ ಮಾತನಾಡಿ, ಬಿಜೆಪಿಯನ್ನು ಟೀಕಿಸುವ ಪಕ್ಷ ಕೇಂದ್ರದಲ್ಲಿ ಏಳು ದಶಕಗಳ ಕಾಲ ಅಧಿಕಾರ ನಡೆಸಿದ ಸಂದರ್ಭ ಭ್ರಷ್ಟಾಚಾರ ನಿರ್ಮೂಲನೆಯ ಮಾತನ್ನಷ್ಟೆ ಆಡಿದೆ. ಆದರೆ, ಮೋದಿ ಅಧಿಕಾರಕ್ಕೆ ಬಂದು ಏಳೂವರೆ ವರ್ಷಗಳ ಅವಧಿಯಲ್ಲಿ ಪ್ರತಿಯೊಬ್ಬರೂ ಬ್ಯಾಂಕ್ ಖಾತೆ ಹೊಂದುವAತೆ ಮಾಡುವ ಮೂಲಕ ಸರ್ಕಾರದ ಯೋಜನೆಗಳ ನೆರವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಿ ಭ್ರಷ್ಟಾಚಾರ ನಿಲ್ಲಿಸುವ ಮಹತ್ವದ ಕೆಲಸ ಮಾಡಿದ್ದಾರೆ ಎಂದರು.
ಕೇಂದ್ರ ಕೃಷಿ ಸಹಾಯಕ ಸಚಿವೆ ಶೋಭಾ ಕರಂದ್ಲಾಜೆ, ಸಹಕಾರ ಸಚಿವ ಸೋಮಶೇಖರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ, ಶಾಸಕರುಗಳಾದ ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್, ಎಂಎಲ್‌ಸಿ ಸುನಿಲ್ ಸುಬ್ರಮಣಿ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವತ್ಥ ನಾರಾಯಣ, ಪಶ್ಚಿಮ ಘಟ್ಟ ಕಾರ್ಯಪಡೆ ಅಧ್ಯಕ್ಷ ರವಿ ಕುಶಾಲಪ್ಪ, ಬಿಜೆಪಿ ಮುಖಂಡರಾದ ರಮೇಶ್, ಉದಯ ಕುಮಾರ್ , ಶಂಕರಪ್ಪ ಮೊದಲಾದವರಿದ್ದರು.