ಮಡಿಕೇರಿ : ಕೇಂದ್ರಕ್ಕೊoದು ಸಂದೇಶ ಹೋಗಲಿ : ಸಚಿವೆ ಶೋಭಾ ಕರಂದ್ಲಾಜೆ

22/11/2021

ಮಡಿಕೇರಿ ನ.22 : ಪ್ರಸ್ತುತ ಬಿಜೆಪಿ 25 ವಿಧಾನ ಪರಿಷತ್ ಸ್ಥಾನಗಳಲ್ಲಿ 20 ಸ್ಥಾನಗಳಿಗೆ ಸ್ಪರ್ಧೆ ಮಾಡಿದೆ. ಇದರಲ್ಲಿ ಗೆಲುವು ಸಾಧಿಸುವ ಮೂಲಕ ಬುದ್ಧಿವಂತರ ಚಾವಡಿ ಎಂದೇ ಕರೆಯಲಾಗುವ ವಿಧಾನ ಪರಿಷತ್‌ನ ಸದಸ್ಯರ ಬೆಂಬಲವೂ ಪ್ರಧಾನಿ ಮೋದಿಯವರಿಗೆ ಇದೆ ಎನ್ನುವ ಸಂದೇಶವನ್ನು ಕೇಂದ್ರಕ್ಕೆ ಕಳುಹಿಸುವಂತಾಗಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಮಡಿಕೇರಿಯಲ್ಲಿ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು ಎದುರಾಗಿರುವ ಎಂಎಲ್‌ಸಿ ಚುನಾವಣೆಯು ವಿಧಾನ ಪರಿಷತ್‌ನಲ್ಲಿ ಬಿಜೆಪಿಗೆ ಬಹುಮತವನ್ನು ದೊರಕಿಸಿಕೊಡಬಹುದಾದ ಮಹತ್ವದ ಚುನಾವಣೆಯಾಗಿದೆ ಎಂದು ಹೇಳಿದರು.
ವಿಧಾನಸಭೆಯಲ್ಲಿ ಚರ್ಚಿತವಾಗುವ ವಿಚಾರಗಳು ಕಾನೂನಾಗಿ ರೂಪುಗೊಳ್ಳುವುದು ವಿಧಾನ ಪರಿಷತ್ ಮೂಲಕ. ಅಲ್ಲಿ ಸಂಬoಧಿಸಿದ ವಿಷಯ ಬಹುಮತ ಪಡೆದುಕೊಳ್ಳದಿದ್ದಲ್ಲಿ ಕಾನೂನಾಗಿ ಹೊರ ಬರಲು ಸಾಧ್ಯವಿಲ್ಲ. ಈ ಹಿನ್ನೆಲೆ ವಿಧಾನ ಪರಿಷತ್‌ನಲ್ಲಿ ಬಹುಮತದ ಅಗತ್ಯತೆ ಇರುವುದಾಗಿ ಸ್ಪಷ್ಟಪಡಿಸಿದರು.
ಒಂದು ಕಾಲಕ್ಕೆ ಕೊಡಗು ಕಾಂಗ್ರೆಸ್ ಭದ್ರಕೋಟೆಯಾಗಿತ್ತಾದರೆ, ಇಂದು ಚುನಾವಣೆಗೆ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸಾಧ್ಯವಾಗದ ಪರಿಸ್ಥಿತಿಗೆ ಕುಸಿದಿದೆ. ಇಲ್ಲಿನ ವಿಧಾನ ಪರಿಷತ್ ಚುನಾವಣೆಯಲ್ಲಿ ಸುಜಾ ಕುಶಾಲಪ್ಪ ಅವರು ಕನಿಷ್ಠ 1 ಸಾವಿರ ಮತಗಳ ಅಂತರದಿoದ ಗೆಲ್ಲುವ ವಿಶ್ವಾಸವಿರುವುದಾಗಿ ನುಡಿದರು.