ಮರು ಸರ್ವೆ ಮಾಡಿ : ಶಾಸಕ ಕೆ.ಜಿ.ಬೋಪಯ್ಯ ಒತ್ತಾಯ

22/11/2021

ಮಡಿಕೇರಿ ನ.22 : ಅಕಾಲಿಕ ಮಳೆಯ ಹಿನ್ನೆಲೆ ಕೊಡಗು ಜಿಲ್ಲೆಯ ಕಾಫಿ ಕೃಷಿಗೆ ಉಂಟಾಗಿರುವ ಹಾನಿಯನ್ನು ಕಾಫಿ ಮಂಡಳಿ ಸಮರ್ಪಕವಾಗಿ ಅಂದಾಜಿಸಿಲ್ಲ. ಆದ್ದರಿಂದ ಕಾಫಿ ಫಸಲು ಹಾನಿಯ ಮರು ಸರ್ವೇ ಕಾರ್ಯ ನಡೆಯಬೇಕೆಂದು ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಆಗ್ರಹಿಸಿದ್ದಾರೆ.
‘ಜನ ಸ್ವರಾಜ್’ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಕಾಲಿಕ ಮಳೆಯಿಂದ ಸೋಮವಶರಪೇಟೆ ತಾಲ್ಲೂಕಿನಲ್ಲಿ ವ್ಯಾಪಕವಾಗಿ ಬೆಳೆಯುವ ಅರೇಬಿಕಾ ಕಾಫಿ ಫಸಲಿಗೆ ಅಪಾರ ಹಾನಿ ಸಂಭವಿಸಿದೆ, ಭತ್ತದ ಕೃಷಿ ಫಸಲನ್ನು ಕೊಯ್ಯುವ ಪರಿಸ್ಥಿತಿ ಇಲ್ಲದಾಗಿದೆ. ಅಡಿಕೆ ಫಸಲು ಕೊಳೆೆತು ಹೋಗಿದೆ ಎಂದು ಗಮನ ಸೆಳೆದರು.
ಕಾಫಿ ಮಂಡಳಿ ಅಕಾಲಿಕ ಮಳೆಯಿಂದ ಕೇವಲ ಶೇ.23 ರಷ್ಟು ಫಸಲು ಹಾನಿಯಾಗಿದೆ ಎನ್ನುವ ಅವೈಜ್ಞಾನಿಕ ವರದಿಯನ್ನು ನೀಡಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಬೋಪಯ್ಯ, ಕಾಫಿ ಹಾನಿಯ ಬಗ್ಗೆ ಕಾಫಿ ಮಂಡಳಿ ಪುನರ್ ಸರ್ವೇ ನಡೆಸಬೇಕೆಂದು ಒತ್ತಾಯಿಸಿದರು.
ಶಾಸಕರ ಆಗ್ರಹಕ್ಕೆ ಕೇಂದ್ರ ಕೃಷಿ ಸಹಾಯಕ ಸಚಿವೆ ಶೋಭಾ ಕರಂದ್ಲಾಜೆ ಅವರು ತಮ್ಮ ಭಾಷಣದಲ್ಲಿ ಪ್ರತಿಕ್ರಿಯಿಸಿ, ಕೊಡಗಿನ ಬೆಳೆಗಾರರ ಸಂಕಷ್ಟಗಳಿಗೆ ಸೂಕ್ತ ಸ್ಪಂದನ ನೀಡುವ ಭರವಸೆ ನೀಡಿದರು, ತಾವು ಬೆಳೆಗಾರರೊಂದಿಗೆ ಇರುವುದಾಗಿ ಸ್ಪಷ್ಟಪಡಿಸಿದರು.