ಸೋಮವಾರಪೇಟೆ : ಮಳೆಯಿಂದ ಕಾಫಿ ಬೆಳೆಗಾರರಿಗೆ ಹೆಚ್ಚು ನಷ್ಟ : ಪರಿಹಾರದ ಕುರಿತು ಸಚಿವ ಅಶೋಕ್ ಮಾಹಿತಿ

22/11/2021

ಸೋಮವಾರಪೇಟೆ ನ.22 : ಅಕಾಲಿಕ ಮಳೆಯಿಂದ ಕಾಫಿ ಬೆಳೆಗಾರರಿಗೆ ಅತಿ ಹೆಚ್ಚಿನ ಹಾನಿಯಾಗಿದ್ದು, ಮತ್ತೊಮ್ಮೆ ಮರು ಸರ್ವೆ ಮಾಡಿಸಿ 15 ದಿನಗಳ ಒಳಗೆ ಸರಕಾರಕ್ಕೆ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ಸೋಮವಾರಪೇಟೆ ತಾಲೂಕು ಕಚೇರಿಯಲ್ಲಿ ಸೋಮವಾರ ಸಂಜೆ ನಡೆದ ಅಕಾಲಿಕ ಮಳೆಯಿಂದ ಬೆಳೆಹಾನಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಕೊಡಗಿನಲ್ಲಿ ರೈತರೇ ಕಾಫಿ ಬೆಳೆಯುತ್ತಿದ್ದು, ಅಕಾಲಿಕ ಮಳೆಯಿಂದ ಪ್ರತಿ ವರ್ಷ ನಷ್ಟ ಅನುಭವಿಸುತ್ತಿರುವ ಬಗ್ಗೆ ಬೆಳೆಗಾರರು ಮನವರಿಕೆ ಮಾಡಿದ್ದಾರೆ. ಬೆಳೆಗಾರರ 10 ಎಚ್.ಪಿ.ವಿದ್ಯುತ್ ಚಾಲಿತ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಕಲ್ಪಿಸುವ ಬಗ್ಗೆ ಮುಖ್ಯಮಂತ್ರಿಗಳೊoದಿಗೆ ಚರ್ಚಿಸಿ, ತೀರ್ಮಾನ ಕೈಗೊಳ್ಳುತ್ತೇವೆ. ಕಾಫಿಯನ್ನು ಕೃಷಿಬೆಳೆ ಎಂದು ಪರಿಗಣಿಸುವ ಬಗ್ಗೆ ಕೇಂದ್ರ ಸರಕಾರಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆದಿದೆ ಎಂದು ಹೇಳಿದರು.
ನವಂಬರ್ 26ರಂದು ಮತ್ತೊಂದು ಚಂಡಮಾರುತ ಅಪ್ಪಳಿಸುವ ಬಗ್ಗೆ ವರದಿಯಿದ್ದು, ಕೊಡಗು, ಉಡುಪಿ, ಬೆಂಗಳೂರಿನಲ್ಲಿ ಮಳೆಯಾಗುವ ಸೂಚನೆಯಿದೆ, ಬೆಳೆಹಾನಿಗೆ ಸರಕಾರ ಪರಿಹಾರ ಕಲ್ಪಿಸಲಿದೆ ಎಂದರು.
ಕೊಡಗಿನಲ್ಲಿ ಮೂರು ಜೀವಹಾನಿಯಾಗಿದೆ. ತಲಾ 5ಲಕ್ಷ ರೂ,ಪರಿಹಾರ ನೀಡಲಾಗುತ್ತದೆ. ಒಟ್ಟು 40,878 ಹೆಕ್ಟೇರ್‌ನಲ್ಲಿ ಬೆಳೆಹಾನಿಯಾಗಿದೆ. ಅದರಲ್ಲಿ 38,500 ಹೆಕ್ಟೇರ್‌ನಲ್ಲಿ ಕಾಫಿ ಫಸಲು ಹಾನಿಯಾಗಿದೆ ಎಂದು ಹೇಳಿದರು. ಶೇ.30ಕ್ಕಿಂತ ಹೆಚ್ಚಿನ ಹಾನಿಯಾಗಿದ್ದರೆ ಸೂಕ್ತ ಪರಿಹಾರ ಕಲ್ಪಿಸಲಾಗುವುದು. ಕೊಡಗಿನಲ್ಲಿ ಮುಂಗಾರಿನಲ್ಲಿ 127 ಕೋಟಿ ರೂ. ಹಾನಿಯಾಗಿದೆ ಎಂದು ಹೇಳಿದರು.
ರಾಜ್ಯದ ಯಾವುದೇ ಭಾಗದಲ್ಲಿ ರೈತರಿಗೆ ತಾವು ಬೆಳೆದ ಬೆಳೆ ನಷ್ಟವಾದಲ್ಲಿ ತಕ್ಷಣವೇ ಸರಕಾರದ ವತಿಯಿಂದ ಅವರ ಬ್ಯಾಂಕ್ ಖಾತೆಗೆ ಹಣ ಜಮೆಯಾಗಬೇಕು. ಬೆಳೆಗಾರರಿಗೆ ಪರಿಹಾರ ನೀಡಬೇಕಾದದು ಸರಕಾರದ ಕರ್ತವ್ಯ.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್, ತಹಶೀಲ್ದಾರ್ ಗೋವಿಂದರಾಜು ವಿವಿಧ ಇಲಾಧಿಕಾರಿಗಳು ಇದ್ದರು.