ಡಿ.18, 19 ಮತ್ತು 20 ರಂದು “ಕುಲ್ಲೇಟಿರ ಕಪ್” ಹಗ್ಗಜಗ್ಗಾಟ ಪಂದ್ಯಾವಳಿ

23/11/2021

ಮಡಿಕೇರಿ ನ.23 : 2018 ರಲ್ಲಿ ಕುಲ್ಲೇಟಿರ ಹಾಕಿ ಹಬ್ಬವನ್ನು ಯಶಸ್ವಿಯಾಗಿ ನಡೆಸಿ ದಾಖಲೆಯ 334 ತಂಡಗಳು ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸಿದ ಕುಲ್ಲೇಟಿರ ಕುಟುಂಬಸ್ಥರ ಕ್ರೀಡಾ ಸಮಿತಿ ಇದೀಗ ಮತ್ತೊಂದು ಕ್ರೀಡಾ ಸ್ಫೂರ್ತಿಯ ಪಂದ್ಯಾವಳಿ ನಡೆಸಲು ಮುಂದಾಗಿದೆ.
ಇದೇ ಡಿ.18, 19 ಮತ್ತು 20 ರಂದು ನಾಪೋಕ್ಲು ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಕೊಡವ ಕುಟುಂಬಗಳ ನಡುವಿನ ರೋಚಕ “ಕುಲ್ಲೇಟಿರ ಕಪ್” ಹಗ್ಗಜಗ್ಗಾಟ ಪಂದ್ಯಾವಳಿಯನ್ನು ಆಯೋಜಿಸಲು ನಿರ್ಧರಿಸಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕ್ರೀಡಾ ಸಮಿತಿಯ ಅಧ್ಯಕ್ಷ ಕುಲ್ಲೇಟಿರ ಶಂಭು ಮಂದಪ್ಪ ಹಾಗೂ ಪ್ರಮುಖರು ಇದೇ ಮೊದಲ ಬಾರಿಗೆ ಕೊಡವ ಕೌಟುಂಬಿಕ ಹಗ್ಗಜಗ್ಗಾಟ ಪಂದ್ಯಾವಳಿಯನ್ನು ನಡೆಸಲಾಗುತ್ತಿದ್ದು, ಪುರುಷರು ಹಾಗೂ ಮಹಿಳೆಯರ ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ ಎಂದು ತಿಳಿಸಿದರು.
ಪುರುಷರ ವಿಭಾಗದಲ್ಲಿ ಸುಮಾರು 100 ಕ್ಕೂ ಅಧಿಕ ಮತ್ತು 50 ಕ್ಕೂ ಹೆಚ್ಚು ಮಹಿಳಾ ಕೊಡವ ಕುಟುಂಬ ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ಒಂದು ತಂಡದಲ್ಲಿ ತಲಾ 9 (7+2) ಆಟಗಾರರು ಪಾಲ್ಗೊಳ್ಳಬಹುದಾಗಿದ್ದು, ವಿಜೇತ ತಂಡಗಳಿಗೆ ಆಕರ್ಷಕ ನಗದು ಬಹುಮಾನ, ಆಕರ್ಷಕ ಟ್ರೋಫಿ ಹಾಗೂ ವೈಯುಕ್ತಿಕ ಟ್ರೋಫಿ ನೀಡಲಾಗುವುದು.
2018 ರಲ್ಲಿ ಕುಲ್ಲೇಟಿರ ಹಾಕಿ ಹಬ್ಬದಲ್ಲಿ ಪಾಲ್ಗೊಂಡಿದ್ದ ಎಲ್ಲಾ ತಂಡಗಳಿಗೆ ಕೊಡವ ಸಾಂಪ್ರದಾಯಿಕ ಒಡಿ ಕತ್ತಿಯನ್ನು ನೀಡಿ ಗೌರವಿಸಲಾಗಿತ್ತು. ಅದೇ ರೀತಿ ಈ ಹಗ್ಗಜಗ್ಗಾಟ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಎಲ್ಲಾ ತಂಡಗಳಿಗೆ ಸಹ ಸ್ಮರಣಿಕೆಯನ್ನು ನೀಡಿ ಗೌರವಿಸಲಾಗುವುದು.
2018 ರಲ್ಲಿ ಕುಲ್ಲೇಟಿರ ಹಾಕಿ ಹಬ್ಬದ ಸಂದರ್ಭದಲ್ಲಿ ಕೊಡವ ಕೌಟುಂಬಿಕ ಹಗ್ಗಜಗ್ಗಾಟ ಪಂದ್ಯಾವಳಿ, “ಪೊಮ್ಮಕ್ಕಡ ದಿವಸ”, “ಬೊಡಿ ನಮ್ಮೆ”, “ಆಟೋ ಎಕ್ಸ್ಪೋ” ಕೂಡ ನಡೆಸಲು ನಿರ್ಧರಿಸಲಾಗಿತ್ತು. ಇವುಗಳಲ್ಲಿ ಹಾಕಿ ಹಬ್ಬದ ಸಂದರ್ಭ “ಪೊಮ್ಮಕ್ಕಡ ದಿವಸ” ಆಚರಿಸಲಾಗಿತ್ತು. ಆದರೆ ಭಾರೀ ಮಳೆಯ ಕಾರಣದಿಂದ ಉಳಿದ ಸ್ಪರ್ಧೆಗಳನ್ನು ನಡೆಸಲು ಸಾಧ್ಯವಾಗಿರಲಿಲ್ಲ. ಇದೀಗ “ಕುಲ್ಲೇಟಿರ ಕಪ್” ಹಗ್ಗಜಗ್ಗಾಟ ಪಂದ್ಯಾವಳಿಯನ್ನು ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೊಡಗಿನ ಎಲ್ಲಾ ಕೊಡವ ಕುಟುಂಬಗಳು ಹಾಗೂ ಕ್ರೀಡಾಭಿಮಾನಿಗಳು ಸಹಕರಿಸಬೇಕೆಂದು ಶಂಭು ಮಂದಪ್ಪ ಮನವಿ ಮಾಡಿದರು.
ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಕೊಡವ ತಂಡಗಳು 2021 ಡಿ.10 ರೊಳಗೆ ಶುಲ್ಕ ರೂ.1 ಸಾವಿರದೊಂದಿಗೆ ಹೆಸರು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ 94486 47343, 94486 47326, 81054 96318, 99800 60312 ಈ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.
ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಕುಲ್ಲೇಟಿರ ಅಜಿತ್ ನಾಣಯ್ಯ, ಖಜಾಂಚಿ ನಂದಾ ನಾಚಪ್ಪ, ಸಂಚಾಲಕ ಕುಲ್ಲೇಟಿರ ಬೇಬ ಅರುಣ್, ನಿರ್ದೇಶಕರಾದ ಕುಲ್ಲೇಟಿರ ಲೋಕೇಶ್ ಹಾಗೂ ಕುಲ್ಲೇಟಿರ ಶಾಂತ ಕಾಳಪ್ಪ ಉಪಸ್ಥಿತರಿದ್ದು ಮಾಹಿತಿ ನೀಡಿದರು.