ಕಾಂಗ್ರೆಸ್ ಸಭೆ : ಮಳೆಹಾನಿಗೆ ಸ್ಪಂದಿಸದೆ ರಾಜಕೀಯ ಜಾತ್ರೆ ಮಾಡುತ್ತಿದ್ದಾರೆ : ಸರಕಾರದ ವಿರುದ್ಧ ಎಂಎಲ್‌ಸಿ ವೀಣಾಅಚ್ಚಯ್ಯ ಅಸಮಾಧಾನ

23/11/2021

ಮಡಿಕೇರಿ ನ.23 : ಅಕಾಲಿಕ ಮಳೆಯಿಂದ ರಾಜ್ಯ ತತ್ತರಿಸಿ ಹೋಗಿದೆ, ಜನ ಸಂಕಷ್ಟದಲ್ಲಿದ್ದಾರೆ. ಜನರ ನೋವಿಗೆ ಸ್ಪಂದಿಸಬೇಕಾದ ಸಚಿವರುಗಳು ಚುನಾವಣೆಯನ್ನು ಮುಂದಿಟ್ಟುಕೊoಡು ರಾಜಕೀಯ ಜಾತ್ರೆ ಮಾಡಲು ಕೊಡಗಿಗೆ ಬಂದಿದ್ದರು ಎಂದು ವಿಧಾನ ಪರಿಷತ್ ಸದಸ್ಯರಾದ ಶಾಂತೆಯoಡ ವೀಣಾಅಚ್ಚಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಧಾನ ಪರಿಷತ್ ಚುನಾವಣೆಯ ಕೊಡಗು ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿ ಮಂಥರ್ ಗೌಡ ಪರ ಮಡಿಕೇರಿಯ ಡಾ.ಅಂಬೇಡ್ಕರ್ ಭವನದಲ್ಲಿ ನಡೆದ ಬೆಂಬಲಿತರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಅತಿ ಮಳೆಯಿಂದ ಸಂಕಷ್ಟ ಎದುರಿಸುತ್ತಿರುವ ಜನರ ಬಳಿಗೆ ಹೋಗಬೇಕಾದ ಸಚಿವರುಗಳು ಚುನಾವಣೆಯನ್ನೇ ಗುರಿಯಾಗಿಸಿ ವಿಧಾನಸೌಧವನ್ನು ಖಾಲಿ ಮಾಡಿ ರಾಜಕೀಯ ಜಾತ್ರೆಯಲ್ಲಿ ತೊಡಗಿದ್ದಾರೆ ಎಂದು ಟೀಕಿಸಿದರು.
ಮಡಿಕೇರಿಯಲ್ಲಿ ನಡೆದ ಸಭೆಯಲ್ಲಿ ಕೆಲವು ಸಚಿವರು ಮಾಡಿದ ಭಾಷಣ ಕೇವಲವಾಗಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಂಸತ್ ಸದಸ್ಯರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಹೊರಗಿನವರೇ ಆಗಿದ್ದಾರೆ. ಹೀಗಿದ್ದೂ ಕಾಂಗ್ರೆಸ್ ಅಭ್ಯರ್ಥಿ ಹೊರಗಿನವರೆಂದು ಬಿಜೆಪಿ ಮಂದಿ ಹೇಳಿಕೆ ನೀಡುವುದು ಸರಿಯಲ್ಲವೆಂದರು.
::: ತಾಯಿಗೆ ದ್ರೋಹ ಮಾಡಬೇಡಿ :::
ಕಾಂಗ್ರೆಸ್ ಪಕ್ಷ ತಾಯಿ ಇದ್ದಂತೆ, ತಾಯಿಗೆ ಯಾರೂ ದ್ರೋಹ ಮಾಡಬಾರದು, ಕಾಂಗ್ರೆಸ್ ಗೆ ದ್ರೋಹ ಮಾಡಿದರೆ ಹೆತ್ತ ತಾಯಿಗೆ ದ್ರೋಹ ಮಾಡಿದಂತೆ ಎಂದು ಚುನಾಯಿತ ಪ್ರತಿನಿಧಿಗಳಿಗೆ ಕಿವಿಮಾತು ಹೇಳಿದ ವೀಣಾಅಚ್ಚಯ್ಯ, ಬೇರೆ ಪಕ್ಷಗಳನ್ನು ಟೀಕಿಸುವ ಬದಲು ನಾವು ಪಕ್ಷ ನಿಷ್ಠೆಯನ್ನು ಪ್ರದರ್ಶಿಸೋಣ ಎಂದರು.
ಗ್ರಾ.ಪA ಪ್ರತಿನಿಧಿಗಳ ಅಂಕಿ, ಅಂಶದ ಅಗತ್ಯವಿಲ್ಲ, ಪ್ರಾಮಾಣಿಕವಾಗಿ ಮತದಾನ ಮಾಡುವ ಮೂಲಕ ಪ್ರತಿಯೊಬ್ಬರು ಕಾಂಗ್ರೆಸ್ ಋಣ ತೀರಿಸಬೇಕು ಎಂದು ಮನವಿ ಮಾಡಿದರು.
ಈಗ ವಿಧಾನ ಪರಿಷತ್ ಚುನಾವಣೆ ಗೆಲ್ಲುವ ಮೂಲಕ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಎರಡೂ ಕ್ಷೇತ್ರಗಳನ್ನು ಗೆಲ್ಲುವ ಉತ್ಸಾಹಕ್ಕೆ ನಾಂದಿ ಹಾಡಬೇಕೆಂದು ವೀಣಾಅಚ್ಚಯ್ಯ ಕರೆ ನೀಡಿದರು.
ಕೆಪಿಸಿಸಿ ವಕ್ತಾರ ಎ.ಎಸ್.ಪೊನ್ನಣ್ಣ ಮಾತನಾಡಿ ಇದು ಕೇವಲ ಚುನಾವಣೆಯಲ್ಲ, ಜಾತ್ಯತೀತ ನೆಲೆಗಟ್ಟಿನ ಯುದ್ಧವಾಗಿದೆ. ಸಂವಿಧಾನ ಗೆಲ್ಲುವುದೇ ಅಥವಾ ಕೋಮುವಾದ ಗೆಲುವು ಸಾಧಿಸುವುದೇ ಎನ್ನುವುದನ್ನು ನೋಡಬೇಕಾಗಿದೆ ಎಂದರು.
ದೇಶದ ಇತಿಹಾಸ ಏಳು ವರ್ಷ ಅಧಿಕಾರ ನಡೆಸಿದವರಿಗೆ ತಿಳಿದಿಲ್ಲ, ಸ್ವಾತಂತ್ರ್ಯಕ್ಕಾಗಿ ಮಹಾತ್ಮ ಗಾಂಧಿ ಅವರ ನೇತೃತ್ವದಲ್ಲಿ ಸಾವಿರಾರು ಜನ ತ್ಯಾಗ, ಬಲಿದಾನ ಮಾಡಿದ್ದಾರೆ. ಈ ರೀತಿ ದೊರೆತ ಸ್ವಾತಂತ್ರ್ಯವನ್ನು ಲೇವಡಿ ಮಾಡಿದವರಿಗೆ ಪದ್ಮಶ್ರೀ ನೀಡಿ ಗೌರವಿಸಲಾಗುತ್ತಿದೆ. ಇದು ದೇಶಕ್ಕೇ ದೊಡ್ಡ ಅವಮಾನವಾಗಿದ್ದು, ಚುನಾವಣೆ ಮೂಲಕ ಈ ಸಂವಿಧಾನ ವಿರೋಧಿ ವ್ಯವಸ್ಥೆಗೆ ಉತ್ತರ ನೀಡಬೇಕಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಉತ್ತಮ ವ್ಯಕ್ತಿತ್ವದ ಯುವ ನಾಯಕನಾಗಿದ್ದು, ವಿದ್ಯಾವಂತರಾಗಿದ್ದಾರೆ. ಇವರ ಗೆಲುವು ಅಭಿವೃದ್ಧಿಗೆ ಸಹಕಾರಿಯಾಗಲಿದ್ದು, ಎಲ್ಲರೂ ಮತ ನೀಡುವಂತೆ ಪೊನ್ನಣ್ಣ ಮನವಿ ಮಾಡಿದರು.
::: ಕಾರ್ಯಕರ್ತನಾಗಿರುವೆ :::
ಅಭ್ಯರ್ಥಿ ಮಂಥರ್ ಗೌಡ ಮಾತನಾಡಿ ಚುನಾವಣೆಯಲ್ಲಿ ಸ್ಪರ್ಧಿಸುವ ನಿರೀಕ್ಷೆಗಳೇ ಇರಲಿಲ್ಲ, ಆದರೆ ಕಾಂಗ್ರೆಸ್ ದೊಡ್ಡ ಅವಕಾಶವನ್ನು ನೀಡಿದೆ. ನಾನು ಕೊಡಗಿಗೆ ನಾಯಕನಾಗಲು ಬಂದಿಲ್ಲ, ಬದಲಿಗೆ ಕಾರ್ಯಕರ್ತನಂತೆ ದುಡಿಯಲು ಬಂದಿದ್ದೇನೆ ಎಂದರು.
ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಆಡಳಿತ ಪಕ್ಷದವರೇ ಆಗಿದ್ದರೂ ಕೊಡಗು ಅಭಿವೃದ್ಧಿ ಶೂನ್ಯವಾಗಿದೆ ಎಂದು ಟೀಕಿಸಿದ ಅವರು, ಚುನಾವಣೆಯಲ್ಲಿ ತೀವ್ರ ಪೈಪೋಟಿ ನೀಡುವುದಾಗಿ ತಿಳಿಸಿದರು.
ನನಗೆ ಬಿಜೆಪಿಯ ಕೋಮುವಾದದ ಸಿದ್ಧಾಂತ ಇಷ್ಟವಿಲ್ಲ, ಇದೇ ಕಾರಣಕ್ಕೆ ನಾನು ತಂದೆಯೊoದಿಗೆ ಬಿಜೆಪಿಗೆ ಹೋಗಿಲ್ಲ, ನಾನು ಕಾಂಗ್ರೆಸ್ ಪಕ್ಷದ ಪ್ರಾಮಾಣಿಕ ಕಾರ್ಯಕರ್ತ. ಕಾಂಗ್ರೆಸ್ ನಲ್ಲಿ ಕಸ ಗುಡಿಸುವುದಕ್ಕೂ ನಾನು ಸಿದ್ಧ ಎಂದು ಮಂಥರ್ ಗೌಡ ಹೇಳಿದರು.
ಕೆಪಿಸಿಸಿ ಮಾಧ್ಯಮ ವಕ್ತಾರ ಟಿ.ಪಿ.ರಮೇಶ್ ಮಾತನಾಡಿ ಕಾಂಗ್ರೆಸ್ ಅಭ್ಯರ್ಥಿಯನ್ನು ಹೊರಗಿನವರು ಎಂದು ಬಿಜೆಪಿ ಟೀಕಿಸುತ್ತಿದೆ. ಈ ಹಿಂದೆ ವಿರಾಜಪೇಟೆ ಶಾಸಕರಾಗಿದ್ದ ಹೆಚ್.ಡಿ.ಬಸವರಾಜು, ಕರ್ನಾಟದಿಂದ ರಾಜ್ಯಸಭೆ ಪ್ರವೇಶಿಸಿದ್ದ ನಿರ್ಮಲಾ ಸೀತಾರಾಂ, ವೆಂಕಯ್ಯ ನಾಯ್ಡು ಅವರುಗಳು ಎಲ್ಲಿಯವರು ಎಂದು ಪ್ರಶ್ನಿಸಿದರು.
ಮಹಾತ್ಮಗಾಂಧಿ ಅವರಿಂದ ಈ ದೇಶದಲ್ಲಿ ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಗೆ ನಾಂದಿ ಹಾಡಲಾಯಿತು. ನಂತರ ಕಾಂಗ್ರೆಸ್ ಪಕ್ಷ ಇದಕ್ಕೆ ಶಕ್ತಿ ತುಂಬುತ್ತಾ ಬಂತು. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಜಿ.ಪಂ, ತಾ.ಪಂ ಮತ್ತು ಗ್ರಾ.ಪಂ ವ್ಯವಸ್ಥೆಗಳ ಮೂಲಕ ಆಡಳಿತವನ್ನು ಜನರ ಕೈಗೆ ನೀಡಿದರು. ಈ ಹಕ್ಕನ್ನು ಉಳಿಸಿಕೊಳ್ಳಬೇಕಾದರೆ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿ ಎಂದು ಮನವಿ ಮಾಡಿದರು.
::: ಒಂದೇ ಕುಟುಂಬದವರಿಗೆ ಅಧಿಕಾರ :::
ಕೆಪಿಸಿಸಿ ಪ್ರಮುಖರು ಹಾಗೂ ಜಿ.ಪಂ ಮಾಜಿ ಅಧ್ಯಕ್ಷರಾದ ಕೆ.ಪಿ.ಚಂದ್ರಕಲಾ ಮಾತನಾಡಿ ಪ್ರಾಮಾಣಿಕ ಕಾರ್ಯಕರ್ತರನ್ನು ಗುರುತಿಸದೆ ಒಂದೇ ಕುಟುಂಬದ ಮೂವರಿಗೆ ಅಧಿಕಾರ ಅನುಭವಿಸಲು ಬಿಜೆಪಿ ಅವಕಾಶ ಕಲ್ಪಿಸಿದೆ ಎಂದು ಲೇವಡಿ ಮಾಡಿದರು.
ಬಿಜೆಪಿ ಆಡಳಿತದಲ್ಲಿ ಕೊಡಗು ಯಾವುದೇ ಅಭಿವೃದ್ಧಿಯನ್ನು ಕಂಡಿಲ್ಲ, ಸರಕಾರಿ ಆಸ್ಪತ್ರೆಗಳಲ್ಲಿ ಆರೋಗ್ಯ ಸಂಬoಧಿತ ವ್ಯವಸ್ಥೆಗಳೇ ಇಲ್ಲ. ಜಿಲ್ಲಾಸ್ಪತ್ರೆಯ ಗರ್ಭಿಣಿಯರ ವಿಭಾಗದಲ್ಲಿ ಮಳೆಗಾಲದಲ್ಲಿ ಆತಂಕದಿAದ ದಾಖಲಾಗಬೇಕಾದ ಪರಿಸ್ಥಿತಿ ಇದೆ. ಕಳೆದ 20- 25 ವರ್ಷಗಳಿಂದ ಅಧಿಕಾರ ಅನುಭವಿಸಿದವರಿಗೆ ಕೊಡಗು ಜಿಲ್ಲೆಗೆ ಒಂದು ಉತ್ತಮ ಆಸ್ಪತ್ರೆಯನ್ನು ನೀಡಲು ಸಾಧ್ಯವಾಗಿಲ್ಲ. ಈ ಬಾರಿ ಜಿ.ಪಂ ಯಿಂದ ಸುಮಾರು 20 ಕೋಟಿ ರೂ.ಗಳು ಅಭಿವೃದ್ಧಿ ಕಾರ್ಯಗಳಿಗೆ ಖರ್ಚಾಗದೆ ಸರಕಾರಕ್ಕೆ ವಾಪಾಸ್ಸಾಗಿದೆ ಎಂದು ಆರೋಪಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಮಾಜಿ ಸಚಿವ ಎಂ.ಸಿ.ನಾಣಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಸ್.ಅರುಣ್ ಮಾಚಯ್ಯ, ಪ್ರಮುಖರಾದ ಹೆಚ್.ಎಸ್.ಚಂದ್ರಮೌಳಿ, ಹಸೈನಾರ್, ವೆಂಕಪ್ಪಗೌಡ, ವಿ.ಕೆ.ಲೋಕೇಶ್, ಮಾಜಿ ಜಿಲ್ಲಾಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ಮಾತನಾಡಿ ಕಾಂಗ್ರೆಸ್ ಅಭ್ಯರ್ಥಿ ಮಂಥರ್ ಗೌಡ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾ ಕಾಂಗ್ರೆಸ್ ಪ್ರಮುಖರ್ ಮುನೀರ್ ಅಹಮ್ಮದ್ ಕಾರ್ಯಕ್ರಮ ನಿರೂಪಿಸಿ, ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಹೊಸೂರು ಸೂರಜ್ ವಂದಿಸಿದರು.
ಸಭೆಯಲ್ಲಿ ಸದಸ್ಯತ್ವ ಅಭಿಯಾಕ್ಕೆ ಪುಸ್ತಕ ಬಿಡುಗಡೆಯ ಮೂಲಕ ಚಾಲನೆ ನೀಡಲಾಯಿತು. ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.