ಏಳು ವರ್ಷ ಅಧಿಕಾರ ನಡೆಸಿದವರಿಗೆ ದೇಶದ ಇತಿಹಾಸ ಗೊತ್ತಿಲ್ಲ : ಎ.ಎಸ್.ಪೊನ್ನಣ್ಣ ಟೀಕೆ

23/11/2021

ಮಡಿಕೇರಿ ನ.23 : ಇದು ಕೇವಲ ಚುನಾವಣೆಯಲ್ಲ, ಜಾತ್ಯತೀತ ನೆಲೆಗಟ್ಟಿನ ಯುದ್ಧವಾಗಿದೆ. ಸಂವಿಧಾನ ಗೆಲ್ಲುವುದೇ ಅಥವಾ ಕೋಮುವಾದ ಗೆಲುವು ಸಾಧಿಸುವುದೇ ಎನ್ನುವುದನ್ನು ನೋಡಬೇಕಾಗಿದೆ ಎಂದು ಕೆಪಿಸಿಸಿ ವಕ್ತಾರ ಎ.ಎಸ್.ಪೊನ್ನಣ್ಣ ತಿಳಿಸಿದ್ದಾರೆ.
ಮಡಿಕೇರಿಯಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿದ ಅವರು ದೇಶದ ಇತಿಹಾಸ ಏಳು ವರ್ಷ ಅಧಿಕಾರ ನಡೆಸಿದವರಿಗೆ ತಿಳಿದಿಲ್ಲ, ಸ್ವಾತಂತ್ರ್ಯಕ್ಕಾಗಿ ಮಹಾತ್ಮ ಗಾಂಧಿ ಅವರ ನೇತೃತ್ವದಲ್ಲಿ ಸಾವಿರಾರು ಜನ ತ್ಯಾಗ, ಬಲಿದಾನ ಮಾಡಿದ್ದಾರೆ. ಈ ರೀತಿ ದೊರೆತ ಸ್ವಾತಂತ್ರ್ಯವನ್ನು ಲೇವಡಿ ಮಾಡಿದವರಿಗೆ ಪದ್ಮಶ್ರೀ ನೀಡಿ ಗೌರವಿಸಲಾಗುತ್ತಿದೆ. ಇದು ದೇಶಕ್ಕೇ ದೊಡ್ಡ ಅವಮಾನವಾಗಿದ್ದು, ಚುನಾವಣೆ ಮೂಲಕ ಈ ಸಂವಿಧಾನ ವಿರೋಧಿ ವ್ಯವಸ್ಥೆಗೆ ಉತ್ತರ ನೀಡಬೇಕಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಂಥರ್ ಗೌಡ  ಉತ್ತಮ ವ್ಯಕ್ತಿತ್ವದ ಯುವ ನಾಯಕನಾಗಿದ್ದು, ವಿದ್ಯಾವಂತರಾಗಿದ್ದಾರೆ. ಇವರ ಗೆಲುವು ಅಭಿವೃದ್ಧಿಗೆ ಸಹಕಾರಿಯಾಗಲಿದ್ದು, ಎಲ್ಲರೂ ಮತ ನೀಡುವಂತೆ ಪೊನ್ನಣ್ಣ ಮನವಿ ಮಾಡಿದರು.