ನಾನು ನಾಯಕನಲ್ಲ ಕಾರ್ಯಕರ್ತ : ಮಂಥರ್ ಗೌಡ

23/11/2021

ಮಡಿಕೇರಿ ನ.23 : ಚುನಾವಣೆಯಲ್ಲಿ ಸ್ಪರ್ಧಿಸುವ ನಿರೀಕ್ಷೆಗಳೇ ಇರಲಿಲ್ಲ, ಆದರೆ ಕಾಂಗ್ರೆಸ್ ದೊಡ್ಡ ಅವಕಾಶವನ್ನು ನೀಡಿದೆ. ನಾನು ಕೊಡಗಿಗೆ ನಾಯಕನಾಗಲು ಬಂದಿಲ್ಲ, ಬದಲಿಗೆ ಕಾರ್ಯಕರ್ತನಂತೆ ದುಡಿಯಲು ಬಂದಿದ್ದೇನೆ ಎಂದು ವಿಧಾನ ಪರಿಷತ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಮಂಥರ್ ಗೌಡ ಹೇಳಿದ್ದಾರೆ.
ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಆಡಳಿತ ಪಕ್ಷದವರೇ ಆಗಿದ್ದರೂ ಕೊಡಗು ಅಭಿವೃದ್ಧಿ ಶೂನ್ಯವಾಗಿದೆ ಎಂದು ಟೀಕಿಸಿದ ಅವರು, ಚುನಾವಣೆಯಲ್ಲಿ ತೀವ್ರ ಪೈಪೋಟಿ ನೀಡುವುದಾಗಿ ತಿಳಿಸಿದರು.
ನನಗೆ ಬಿಜೆಪಿಯ ಕೋಮುವಾದದ ಸಿದ್ಧಾಂತ ಇಷ್ಟವಿಲ್ಲ, ಇದೇ ಕಾರಣಕ್ಕೆ ನಾನು ತಂದೆಯೊoದಿಗೆ ಬಿಜೆಪಿಗೆ ಹೋಗಿಲ್ಲ, ನಾನು ಕಾಂಗ್ರೆಸ್ ಪಕ್ಷದ ಪ್ರಾಮಾಣಿಕ ಕಾರ್ಯಕರ್ತ. ಕಾಂಗ್ರೆಸ್ ನಲ್ಲಿ ಕಸ ಗುಡಿಸುವುದಕ್ಕೂ ನಾನು ಸಿದ್ಧ ಎಂದು ಮಂಥರ್ ಗೌಡ ಹೇಳಿದರು.
ಕೆಪಿಸಿಸಿ ಮಾಧ್ಯಮ ವಕ್ತಾರ ಟಿ.ಪಿ.ರಮೇಶ್ ಮಾತನಾಡಿ ಕಾಂಗ್ರೆಸ್ ಅಭ್ಯರ್ಥಿಯನ್ನು ಹೊರಗಿನವರು ಎಂದು ಬಿಜೆಪಿ ಟೀಕಿಸುತ್ತಿದೆ. ಈ ಹಿಂದೆ ವಿರಾಜಪೇಟೆ ಶಾಸಕರಾಗಿದ್ದ ಹೆಚ್.ಡಿ.ಬಸವರಾಜು, ಕರ್ನಾಟದಿಂದ ರಾಜ್ಯಸಭೆ ಪ್ರವೇಶಿಸಿದ್ದ ನಿರ್ಮಲಾ ಸೀತಾರಾಂ, ವೆಂಕಯ್ಯ ನಾಯ್ಡು ಅವರುಗಳು ಎಲ್ಲಿಯವರು ಎಂದು ಪ್ರಶ್ನಿಸಿದರು.
ಮಹಾತ್ಮಗಾಂಧಿ ಅವರಿಂದ ಈ ದೇಶದಲ್ಲಿ ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಗೆ ನಾಂದಿ ಹಾಡಲಾಯಿತು. ನಂತರ ಕಾಂಗ್ರೆಸ್ ಪಕ್ಷ ಇದಕ್ಕೆ ಶಕ್ತಿ ತುಂಬುತ್ತಾ ಬಂತು. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಜಿ.ಪಂ, ತಾ.ಪಂ ಮತ್ತು ಗ್ರಾ.ಪಂ ವ್ಯವಸ್ಥೆಗಳ ಮೂಲಕ ಆಡಳಿತವನ್ನು ಜನರ ಕೈಗೆ ನೀಡಿದರು. ಈ ಹಕ್ಕನ್ನು ಉಳಿಸಿಕೊಳ್ಳಬೇಕಾದರೆ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿ ಎಂದು ಮನವಿ ಮಾಡಿದರು.