ಬಿಜೆಪಿಯಿಂದ ಒಂದೇ ಕುಟುಂಬದ ಮೂವರಿಗೆ ಅಧಿಕಾರ : ಕೆ.ಪಿ.ಚಂದ್ರಕಲಾ ವ್ಯಂಗ್ಯ

23/11/2021

ಮಡಿಕೇರಿ ನ.23 : ಪ್ರಾಮಾಣಿಕ ಕಾರ್ಯಕರ್ತರನ್ನು ಗುರುತಿಸದೆ ಒಂದೇ ಕುಟುಂಬದ ಮೂವರಿಗೆ ಅಧಿಕಾರ ಅನುಭವಿಸಲು ಬಿಜೆಪಿ ಅವಕಾಶ ಕಲ್ಪಿಸಿದೆ ಎಂದು ಕೆಪಿಸಿಸಿ ಪ್ರಮುಖರು ಹಾಗೂ ಜಿ.ಪಂ ಮಾಜಿ ಅಧ್ಯಕ್ಷರಾದ ಕೆ.ಪಿ.ಚಂದ್ರಕಲಾ ಲೇವಡಿ ಮಾಡಿದರು.
ಮಡಿಕೇರಿಯಲ್ಲಿ ನಡೆದ ಕಾಂಗ್ರೆಸ್ ಬೆಂಬಲಿತರ ಸಭೆಯಲ್ಲಿ ಮಾತನಾಡಿದ ಅವರು ಬಿಜೆಪಿ ಆಡಳಿತದಲ್ಲಿ ಕೊಡಗು ಯಾವುದೇ ಅಭಿವೃದ್ಧಿಯನ್ನು ಕಂಡಿಲ್ಲ, ಸರಕಾರಿ ಆಸ್ಪತ್ರೆಗಳಲ್ಲಿ ಆರೋಗ್ಯ ಸಂಬoಧಿತ ವ್ಯವಸ್ಥೆಗಳೇ ಇಲ್ಲ. ಜಿಲ್ಲಾಸ್ಪತ್ರೆಯ ಗರ್ಭಿಣಿಯರ ವಿಭಾಗದಲ್ಲಿ ಮಳೆಗಾಲದಲ್ಲಿ ಆತಂಕದಿoದ ದಾಖಲಾಗಬೇಕಾದ ಪರಿಸ್ಥಿತಿ ಇದೆ. ಕಳೆದ 20- 25 ವರ್ಷಗಳಿಂದ ಅಧಿಕಾರ ಅನುಭವಿಸಿದವರಿಗೆ ಕೊಡಗು ಜಿಲ್ಲೆಗೆ ಒಂದು ಉತ್ತಮ ಆಸ್ಪತ್ರೆಯನ್ನು ನೀಡಲು ಸಾಧ್ಯವಾಗಿಲ್ಲ. ಈ ಬಾರಿ ಜಿ.ಪಂ ಯಿಂದ ಸುಮಾರು 20 ಕೋಟಿ ರೂ.ಗಳು ಅಭಿವೃದ್ಧಿ ಕಾರ್ಯಗಳಿಗೆ ಖರ್ಚಾಗದೆ ಸರಕಾರಕ್ಕೆ ವಾಪಾಸ್ಸಾಗಿದೆ ಎಂದು ಆರೋಪಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಮಾಜಿ ಸಚಿವ ಎಂ.ಸಿ.ನಾಣಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಸ್.ಅರುಣ್ ಮಾಚಯ್ಯ, ಪ್ರಮುಖರಾದ ಹೆಚ್.ಎಸ್.ಚಂದ್ರಮೌಳಿ, ಹಸೈನಾರ್, ವೆಂಕಪ್ಪಗೌಡ, ವಿ.ಕೆ.ಲೋಕೇಶ್, ಮಾಜಿ ಜಿಲ್ಲಾಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ಮಾತನಾಡಿ ಕಾಂಗ್ರೆಸ್ ಅಭ್ಯರ್ಥಿ ಮಂಥರ್ ಗೌಡ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾ ಕಾಂಗ್ರೆಸ್ ಪ್ರಮುಖರ್ ಮುನೀರ್ ಅಹಮ್ಮದ್ ಕಾರ್ಯಕ್ರಮ ನಿರೂಪಿಸಿ, ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಹೊಸೂರು ಸೂರಜ್ ವಂದಿಸಿದರು.
ಸಭೆಯಲ್ಲಿ ಸದಸ್ಯತ್ವ ಅಭಿಯಾಕ್ಕೆ ಪುಸ್ತಕ ಬಿಡುಗಡೆಯ ಮೂಲಕ ಚಾಲನೆ ನೀಡಲಾಯಿತು. ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.