ಅತ್ಯಧಿಕ ಮತಗಳಿಂದ ಜಯ : ಸುಜಾ ಕುಶಾಲಪ್ಪ ವಿಶ್ವಾಸ

23/11/2021

ಮಡಿಕೇರಿ ನ.23 : ಅತ್ಯಧಿಕ ಮತಗಳನ್ನು ಪಡೆಯುವುದರೊಂದಿಗೆ ವಿಧಾನ ಪರಿಷತ್ ಪ್ರವೇಶಿಸುವುದಾಗಿ ಬಿಜೆಪಿ ಅಭ್ಯರ್ಥಿ ಸುಜಾ ಕುಶಾಲಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಿಲ್ಲೆಯಲ್ಲಿ ಗ್ರಾ.ಪಂ., ಪಟ್ಟಣ ಪಂಚಾಯತ್ ಹಾಗೂ ನಗರಸಭೆಯ 1334 ಸದಸ್ಯರು ಮತದಾನದ ಹಕ್ಕು ಹೊಂದಿದ್ದು, ಈ ಪೈಕಿ 800ಕ್ಕೂ ಅಧಿಕ ಮಂದಿ ಬಿಜೆಪಿ ಬೆಂಬಲಿತ ಸದಸ್ಯರಿದ್ದಾರೆ. ಕಳೆದ 34 ವರ್ಷಗಳಿಂದ ತಾನು ಸಾಮಾಜಿಕ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು, ಅಧಿಕಾರವಿಲ್ಲದಿದ್ದರೂ ಸಾಕಷ್ಟು ಮಂದಿಗೆ ಸಹಾಯ ಮಾಡಿರುವುದರಿಂದ ಈ ಚುನಾವಣೆಯಲ್ಲಿ ಒಂದು ಸಾವಿರಕ್ಕೂ ಅಧಿಕ ಮತಗಳನ್ನು ಪಡೆದು ಜಯ ಗಳಿಸುವುದಾಗಿ ತಿಳಿಸಿದರು.
ವೀರಾಜಪೇಟೆಯ ಶ್ರೀ ಗಣಪತಿ ದೇವಸ್ಥಾನ ಹಾಗೂ ನಗರದ ಚೌಡೇಶ್ವರಿ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದ ಬಳಿಕ ಬೆಂಬಲಿಗರೊoದಿಗೆ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಗೆ ಆಗಮಿಸಿದ ಬಿಜೆಪಿ ಅಭ್ಯರ್ಥಿ ಸುಜಾ ಕುಶಾಲಪ್ಪ ಚುನಾವಣಾಧಿಕಾರಿ ಡಾ.ಬಿ.ಸಿ.ಸತೀಶ್ ಅವರಿಗೆ ನಾಮಪತ್ರ ಸಲ್ಲಿಸಿದರು.
ಸಂಸದ ಪ್ರತಾಪಸಿಂಹ, ಶಾಸಕರುಗಳಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚುರoಜನ್, ಪಕ್ಷದ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಹಾಜರಿದ್ದರು.