ರಾಜ್ಯ ಸರಕಾರದ ವಿರುದ್ಧ ಕೊಡಗು ಮಾಜಿ ಯೋಧರ ಸಂಘ ಅಸಮಾಧಾನ

23/11/2021

ಮಡಿಕೇರಿ ನ.23 : ರಾಷ್ಟ್ರದ ಗಡಿಗಳನ್ನು ಕಾಯ್ದು ನಿವೃತ್ತ ಜೀವನವನ್ನು ನೆಮ್ಮದಿಯಿಂದ ಕಳೆಯಲು ಕೊಡಗಿಗೆ ಬಂದು ನೆಲೆಸಿರುವ ಮಾಜಿ ಸೈನಿಕರಿಗೆ ಕನಿಷ್ಟ ಗೌರವ ಮತ್ತು ಸೌಲಭ್ಯಗಳನ್ನು ನೀಡದೆ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಅತ್ಯಂತ ನಿರ್ಲಕ್ಷ್ಯದಿಂದ ನಡೆದುಕೊಳ್ಳುತ್ತಿದೆ ಎಂದು ಕೊಡಗು ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಮೇಜರ್ ಜನರಲ್ ಬಿ.ಎ. ಕಾರ್ಯಪ್ಪ (ನಿವೃತ್ತ) ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವು ಕಳೆದ ಎರಡು ದಶಕಗಳಿಗೂ ಹೆಚ್ಚಿನ ಅವಧಿಯಿಂದ ಮಾಜಿ ಸೈನಿಕರಿಗೆ ಜಾಗ ಮಂಜೂರು ಮಾಡುವಂತೆ ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಮನವಿ ಸಲ್ಲಿಸುತ್ತಲೇ ಬರಲಾಗಿದೆ. ಆದರೆ ಇಲ್ಲಿಯವರೆಗೂ ಈ ಬಗ್ಗೆ ಸೂಕ್ತ ಸ್ಪಂದನ ದೊರಕಿಲ್ಲ ಎಂದು ಆರೋಪಿಸಿದರು.
ಜಿಲ್ಲೆಗೆ ಬರುವ ರಾಜಕಾರಣಿಗಳು ಫೀ.ಮಾ.ಕಾರ್ಯಪ್ಪ, ಜ.ತಿಮ್ಮಯ್ಯ ಹಾಗೂ ಸೈನಿಕರನ್ನು ಹೊಗಳಿ ಹೋಗುತ್ತಾರೆಯೇ ಹೊರತು ಇಲ್ಲಿಯೇ ನೆಲೆಸಿರುವ ಮಾಜಿ ಸೈನಿಕರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲವೆAದು ಬೇಸರ ವ್ಯಕ್ತಪಡಿಸಿದರು.
::: ಬೇರೆಡೆ ಹುಟ್ಟಬೇಕಿತ್ತು :::
ಸಂಕಷ್ಟದಲ್ಲಿರುವ ಮಾಜಿ ಸೈನಿಕರಿಗೆ ಅವರು ಒತ್ತುವರಿ ಮಾಡಿಕೊಂಡಿರುವ ಜಾಗವನ್ನು ಮಂಜೂರು ಮಾಡಿಕೊಡಿ ಎನ್ನುವ ನಮ್ಮ ಕೂಗಿಗೆ ಬೆಲೆ ಇಲ್ಲದಂತಾಗಿದೆ. ನಮ್ಮ ಯಾವುದೇ ಬೇಡಿಕೆಗಳಿಗೆ ಸೂಕ್ತ ಸ್ಪಂದನ, ನೆರವನ್ನು ಆಡಳಿತ ವ್ಯವಸ್ಥೆ ನೀಡುತ್ತಿಲ್ಲ. ಇದೆಲ್ಲವನ್ನು ನೋಡುವಾಗ ನಾನು ಬೇರೆಡೆ ಹುಟ್ಟಿದ್ದರೆ ಒಳಿತಿತ್ತು, ಯೋಧರಿಗೆ ಸೂಕ್ತ ಸ್ಪಂದನ ನೀಡುತ್ತಿರುವ ಪಂಜಾಬ್, ತೆಲಂಗಾಣದಲ್ಲಿ ಹುಟ್ಟಬೇಕಿತ್ತು ಎನ್ನುವ ಭಾವನೆ ಬರುತ್ತದೆ ಎಂದು ಕಾರ್ಯಪ್ಪ ನೋವಿನಿಂದ ನುಡಿದರು.
::: ವಿಲೇವಾರಿಯಾಗದ 500 ಅರ್ಜಿ :::
ಜಿಲೆಯಲ್ಲಿ ನೆಲೆಸಿ, ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಕೃಷಿ ಚಟುವಟಿಕೆ ನಡೆಸುತ್ತಾ, ತಾವು ಹೊಂದಿರುವ ಜಾಗದ ಮಂಜೂರಾತಿಗೆ ಮಾಜಿ ಸೈನಿಕರಿಂದ ಸಲ್ಲಿಸಲಾಗಿರುವ 500 ಅರ್ಜಿಗಳು ಇನ್ನೂ ವಿಲೇವಾರಿಯಾಗದೆ ಹಾಗೆಯೇ ಬಾಕಿ ಉಳಿದಿದೆ. ಈ ಬಗ್ಗೆ ಈಗಿನ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಚರ್ಚಿಸಲಾಗುವುದೆಂದರು.
ಜಿಲ್ಲೆಯ ಕೆಲವೆಡೆ ಅದಾಗಲೆ ಮಾಜಿ ಸೈನಿಕರಿಗೆ ಹಕ್ಕುಪತ್ರ ನೀಡಲ್ಪಟ್ಟ ಜಾಗದ ಹಕ್ಕುಪತ್ರವನ್ನು ತಹಶೀಲ್ದಾರರು ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆಂದು ಬೇಸರ ವ್ಯಕ್ತಪಡಿಸಿದ ಮೇ.ಜ. ಕಾರ್ಯಪ್ಪ, ಮಾಜಿ ಸೈನಿಕರ ಮೇಲೆ ಕನಿಕರವೇ ಇಲ್ಲದ ಪರಿಸ್ಥಿತಿ ಇರುವುದಾಗಿ ತಿಳಿಸಿದರು.
::: ಹೊರಗಿನವರಿಂದ ಪ್ರತಿಭಟನೆ :::
ಬೋಯಿಕೇರಿ ವಿಭಾಗದಲ್ಲಿ ನಡೆದ ಅಪಘಾತ ಘಟನೆಯೊಂದಕ್ಕೆ ಸಂಬAಧಿಸಿದAತೆ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘವೆoದು ಹೇಳಿಕೊಂಡು ಹೊರಗಿನವರನ್ನು ಕರೆಸಿ ಇಲ್ಲಿ ಪ್ರತಿಭಟನೆ ನಡೆಸುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದರು.
ಇತ್ತೀಚೆಗೆ ಜಿಲ್ಲೆಯಲ್ಲಿ ರಚನೆಯಾಗಿರುವ ಮತ್ತೊಂದು ಮಾಜಿ ಸೈನಿಕರ ಸಂಘದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಮೇಜರ್ ಚಿಂಗಪ್ಪ ಮಾತನಾಡಿ, ಮಾಜಿ ಸೈನಿಕರಿಗೆ ಜಾಗ ಒದಗಿಸಬೇಕೆನ್ನುವ ಸ್ಪಷ್ಟ ಆದೇಶವನ್ನು ನ್ಯಾಯಾಲಯ ಮತ್ತು ಸರ್ಕಾರಗಳು ನೀಡಿದ್ದರು ಅದರ ಅನುಷ್ಟಾನ ಕೆಳಹಂತದಲ್ಲಿ ನಡೆಯುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಸದಸ್ಯರುಗಳಾದ ಕರ್ನಲ್ ಎ.ಇ.ಗಣಪತಿ, ಮಾದಪ್ಪ, ಶನಿವಾರಸಂತೆ ಘಟಕದ ಅಧ್ಯಕ್ಷ ಮಹೇಶ್ ಹಾಗೂ ಮಡಿಕೇರಿ ಘಟಕದ ಅಧ್ಯಕ್ಷ ಪಾನಿಕುಟ್ಟೀರ ಕುಟ್ಟಪ್ಪ ಉಪಸ್ಥಿತರಿದ್ದರು.