ಪ್ರತಿಯೊಬ್ಬರಿಗೂ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕಿದೆ : ಜೆಡಿಎಸ್ ಅಭ್ಯರ್ಥಿ ಇಸಾಕ್ ಖಾನ್

23/11/2021

ಮಡಿಕೇರಿ ನ.23 : ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್, ರಾಜ್ಯ ಸಮಿತಿ ಸದಸ್ಯ ಮನ್ಸೂರ್ ಅಲಿ ಮತ್ತಿತರ ಪ್ರಮುಖರೊಂದಿಗೆ ಆಗಮಿಸಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದ ಜೆಡಿಎಸ್ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇಸಾಕ್ ಖಾನ್, ಹಣ ಬಲವಿದ್ದರೆ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂಬ ಭಯ ಜನರಲ್ಲಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕಿದೆ ಎಂಬ ಸಂದೇಶ ನೀಡುವುದೇ ತಮ್ಮ ಸ್ಪರ್ಧೆಯ ಉದ್ದೇಶ ಎಂದು ಹೇಳಿದರು.
ಇತರ ಪಕ್ಷಗಳಲ್ಲಿ ಹಣ ಬಲ ಇರುವವರಿಗೆ ಮಾತ್ರ ಟಿಕೆಟ್ ನೀಡಲಾಗುತ್ತದೆ. ಆದರೆ ಜೆಡಿಎಸ್ ಸಾಮಾನ್ಯ ಕಾರ್ಯಕರ್ತನಲ್ಲಿರುವ ನಾಯಕತ್ವದ ಗುಣವನ್ನು ಗಮನಿಸಿ ಟಿಕೆಟ್ ನೀಡಿ ಬೆಳೆಸುತ್ತಿರುವುದಕ್ಕೆ ಪಕ್ಷದ ವರಿಷ್ಠರು ಅಲ್ಪಸಂಖ್ಯಾತನಾಗಿರುವ ನನಗೆ ಟಿಕೆಟ್ ನೀಡಿರುವುದೇ ಸಾಕ್ಷಿಯಾಗಿದೆ ಎಂದರು.
ಜಿಲ್ಲೆಯ ಎಲ್ಲಾ ಮತದಾರರನ್ನು ಸಂಪರ್ಕಿಸಿ ಮತ ಯಾಚಿಸುವುದಾಗಿ ತಿಳಿಸಿದ ಅವರು, ಗೆಲುವು ಸಾಧಿಸಿದಲ್ಲಿ ಗ್ರಾ.ಪಂ.ಗಳ ಹಾಗೂ ಸದಸ್ಯರ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಅವರು ನುಡಿದರು.