ನಾನು ಕೊಡಗಿನ ಅಳಿಯ : ಕಾಂಗ್ರೆಸ್ ಅಭ್ಯರ್ಥಿ ಮಂಥರ್ ಗೌಡ

ಮಡಿಕೇರಿ ನ.23 : ಕಾಂಗ್ರೆಸ್ ಅಭ್ಯರ್ಥಿ ಮಂಥರ್ ಗೌಡ ಅವರು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಪಕ್ಷದ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಪ್ರಮುಖರಾದ ಹೆಚ್.ಎಸ್.ಚಂದ್ರಮೌಳಿ, ವಕೀಲ ಶ್ರೀಧರನ್ ನಾಯರ್ ಅವರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು, ತಾನು ಸೋಮವಾರಪೇಟೆಯ ಸಾಕಮ್ಮ ಅವರ ಕುಟುಂಬದ ಕುಡಿಯಾಗಿದ್ದು, ಚೆಪ್ಪುಡಿರ ಕುಟುಂಬದಿoದ ವಿವಾಹವಾಗಿರುವುದರಿಂದ ಕೊಡಗಿನ ಅಳಿಯನೂ ಆಗಿದ್ದೇನೆ. ಅಲ್ಲದೆ ಕೊಡಗಿನಲ್ಲಿ ಕಾಫಿ ತೋಟವನ್ನೂ ಹೊಂದಿದ್ದು, ಆಮದು ಅಭ್ಯರ್ಥಿ ಎಂಬುದು ಸರಿಯಲ್ಲ ಎಂದು ಸಮರ್ಥಿಸಿಕೊಂಡರು.
::: ಫಾದರ್ ಗಾಡ್ ಫಾದರ್ ಅಲ್ಲ :::
ರಾಜಕೀಯವಾಗಿ ತಂದೆಗೂ ತನಗೂ ಯಾವುದೇ ಸಂಬoಧವಿಲ್ಲ. ಅವರು ಗಾಡ್ ಫಾದರ್ ಕೂಡಾ ಅಲ್ಲ, ಕಾಂಗ್ರೆಸ್ಸೇ ನನಗೆ ರಾಜಕೀಯ ಗಾಡ್ ಫಾದರ್ ಆಗಿದ್ದು, ಪಕ್ಷದ ವರಿಷ್ಠರಾದ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರುಗಳು ಪಕ್ಷದಿಂದ ಟಿಕೆಟ್ ನೀಡಿ ಆಶೀರ್ವದಿಸಿದ್ದಾರೆ. ಕೊಡಗು ಜಿಲ್ಲಾ ಕಾಂಗ್ರೆಸ್ ನ ಪ್ರಮುಖರು ಹಾಗೂ ಕಾರ್ಯಕರ್ತರ ಪ್ರಯತ್ನದಿಂದ ತಾನು ಗೆಲುವು ಸಾಧಿಸುವುದು ನಿಶ್ಚಿತ ಎಂದರು.
ಕೇoದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ, ಗ್ರಾ.ಪಂ ಸದಸ್ಯರಿಗೇ ಇನ್ನೂ ಮನೆ ನಿರ್ಮಿಸಿಕೊಡಲು ಸಾಧ್ಯವಾಗಿಲ್ಲ. ಮೂಲ ಸೌಕರ್ಯಗಳು ಈ ಮೊದಲೇ ಇಲ್ಲ. ಹೀಗಿರುವಾಗ ಬಿಜೆಪಿಯವರಿಗೆ ಮತ ಕೇಳುವ ನೈತಿಕತೆಯೇ ಇಲ್ಲ ಎಂದು ಅವರು ಟೀಕಿಸಿದರು.