ಮಡಿಕೇರಿ : ಬಿಜೆಪಿಗೆ ಅಧಿಕಾರ ಕೇಂದ್ರೀಕರಣದ ಮೇಲೆ ಒಲವು : ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವ ನಾರಾಯಣ ಟೀಕೆ

24/11/2021

ಮಡಿಕೇರಿ ನ.24 : ಬಿಜೆಪಿಗೆ ಅಧಿಕಾರ ಕೇಂದ್ರೀಕರಣದ ಮೇಲೆ ಒಲವಿದೆಯೇ ಹೊರತು ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಅಧಿಕಾರ ವಿಕೇಂದ್ರೀಕರಣದ ಮೇಲೆ ನಂಬಿಕೆ ಇಲ್ಲವೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವ ನಾರಾಯಣ ಟೀಕಿಸಿದ್ದಾರೆ.
ಮಡಿಕೇರಿ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೇಶದಲ್ಲಿ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಮಹಿಳೆಯರು ಸೇರಿದಂತೆ ಎಲ್ಲಾವರ್ಗಕ್ಕೂ ಅಧಿಕಾರ ಹಂಚಿಕೆಯ ವಿಕೇಂದ್ರೀಕರಣದ ಪರಿಕಲ್ಪನೆಯನ್ನು ಕಾಂಗ್ರೆಸ್ ಪಕ್ಷ ಜಾರಿಗೆ ತಂದಿತು. ಆದರೆ ಬಿಜೆಪಿಗೆ ಎಲ್ಲರಿಗೂ ಅಧಿಕಾರ ಸಿಗುವುದು ಇಷ್ಟವಿಲ್ಲವೆಂದು ಆರೋಪಿಸಿದರು.
ಅಧಿಕಾರ ವಿಕೇಂದ್ರೀಕರಣದ ಕೊಡುಗೆಯನ್ನು ನೀಡಿರುವ ಕಾಂಗ್ರೆಸ್ ಪಕ್ಷದ ಬಗ್ಗೆ ನಮಗೆ ಹೆಮ್ಮೆ ಇದೆ. ಇಂದಿಗೂ ಎಲ್ಲಾ ವರ್ಗದವರಿಗೆ ಸಮಾನ ಅವಕಾಶ ನೀಡುವ ಕಾರ್ಯವನ್ನು ಜಾತ್ಯತೀತ ತತ್ವದ ನಮ್ಮ ಪಕ್ಷ ಮಾಡುತ್ತಿದೆ. ಮಹಿಳೆಯರು ಹಾಗೂ ಯುಕವರಿಗೆ ಆದ್ಯತೆ ನೀಡುತ್ತಿದೆ. ಬಿಜೆಪಿ ಚುನಾವಣೆ ಸಂದರ್ಭದ ತಂತ್ರಗಾರಿಕೆಗಷ್ಟೇ ಸೀಮಿತವಾಗಿದೆ. ಅಧಿಕಾರಕ್ಕೆ ಬಂದು ಮೂರು ವರ್ಷವಾದರೂ ಗ್ರಾ.ಪಂ ಪ್ರತಿನಿಧಿಗಳ ಗೌರವಧನವನ್ನು ಏರಿಕೆ ಮಾಡಲು ರಾಜ್ಯ ಸರಕಾರಕ್ಕೆ ಸಾಧ್ಯವಾಗಿಲ್ಲ. ಇದೀಗ ಚುನಾವಣೆಯ ಸಂದರ್ಭದಲ್ಲಿ ಮತದಾರರ ಹಾದಿ ತಪ್ಪಿಸುವ ಉದ್ದೇಶದಿಂದ ಗೌರವಧನ ಏರಿಸುವ ಭರವಸೆಯನ್ನು ಗ್ರಾಮೀಣ ಸಚಿವರು ನೀಡುತ್ತಿದ್ದಾರೆ ಎಂದು ಧ್ರುವ ನಾರಾಯಣ್ ಟೀಕಿಸಿದರು.
::: ದೇಶ ಬರ್ಬಾದ್ ಆಗಿದೆ :::
ಸಚಿವರು ಕಾಂಗ್ರೆಸ್ ಬರ್ಬಾದ್ ಆಗಿದೆ ಎಂದು ಹೇಳಿಕೆ ನೀಡಿದ್ದಾರೆ, ಆದರೆ ಬಿಜೆಪಿಯ ದುರಾಡಳಿತದಿಂದ ಇಂದು ದೇಶ ಬರ್ಬಾದ್ ಆಗಿದೆ ಎಂದು ಧ್ರುವ ನಾರಾಯಣ್ ಅಸಮಾಧಾನ ವ್ಯಕ್ತಪಡಿಸಿದರು. ಕಾಂಗ್ರೆಸ್ ಇನ್ನೂ ಸದೃಢವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ, ಯುವ ಜನತೆ ನಿರುದ್ಯೋಗದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಆರ್ಥಿಕ ಹಿನ್ನಡೆಯಿಂದ ಆದಾಯವಿಲ್ಲದೆ ಜನ ಕಂಗಾಲಾಗಿದ್ದಾರೆ. ಬಿಜೆಪಿ ನಡೆಸುತ್ತಿರುವುದು ಜನಸ್ವರಾಜ್ ಸಮಾವೇಶವಲ್ಲ ಜನ ವಿರೋಧಿ ಸಮಾವೇಶ ಎಂದು ಟೀಕಿಸಿದರು.
ರಸಗೊಬ್ಬರ ಸೇರಿದಂತೆ ಎಲ್ಲಾ ಕೃಷಿ ಪರಿಕರಗಳ ಬೆಲೆ ದುಬಾರಿಯಾಗಿದೆ. ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ನಿರಂತರ ಹೋರಾಟ ಮತ್ತು ರೈತರ ಸಾವಿಗೆ ಸರಕಾರ ಕಾರಣವಾಗಿದೆ. ಇದರ ನಡುವೆಯೂ ಕೇಂದ್ರ ಕೃಷಿ ಸಚಿವೆ ಶೋಭಾಕರಂದ್ಲಾಜೆ ಅವರು ಸರಕಾರ ರೈತರ ಜೊತೆಗಿರುವುದಾಗಿ ಹಾಸ್ಯಾಸ್ಪದ ಹೇಳಿಕೆ ನೀಡಿದ್ದಾರೆ ಎಂದು ವ್ಯಂಗ್ಯವಾಡಿದರು.
::: ಮಂಥರ್ ಗೌಡ ಹೊರಗಿನವರಲ್ಲ :::
ಕೊಡಗಿನ ಮೂಲಕ ವಿಧಾನ ಪರಿಷತ್ ಗೆ ಸ್ಪರ್ಧಿಸುತ್ತಿರುವ ಮಂಥರ್ ಗೌಡ ಹೊರಗಿನವರಲ್ಲ, ಕೌಟುಂಬಿಕವಾಗಿ ಕೊಡಗಿಗೆ ಹತ್ತಿರವಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಶೋಭಾ ಕರಂದ್ಲಾಜೆ ಅವರು ಬೆಂಗಳೂರಿನಿAದ ಹಾಗೂ ಮೈಸೂರಿನ ಪ್ರತಾಪ್ ಸಿಂಹ ಅವರು ಕೊಡಗನ್ನು ಪ್ರತಿನಿಧಿಸಲಿಲ್ಲವೇ ಎಂದು ಪ್ರಶ್ನಿಸಿದರು.
ಯಾವುದೇ ಪಕ್ಷದ ಚಿಹ್ನೆಯ ಆಧಾರದಲ್ಲಿ ಗ್ರಾ.ಪಂ ಪ್ರತಿನಿಧಿಗಳು ಆಯ್ಕೆಯಾಗಿಲ್ಲ, ಆದ್ದರಿಂದ ಕೊಡಗಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಪರ ಹೆಚ್ಚಿನ ಮತಗಳು ಲಭಿಸಲಿವೆ ಎಂದು ಧ್ರುವ ನಾರಾಯಣ ವಿಶ್ವಾಸ ವ್ಯಕ್ತಪಡಿಸಿದರು.
::: ಬಿಜೆಪಿಗೆ ಬೇತಾಳ ಕಾಟ :::
ಕೆಪಿಸಿಸಿ ವಕ್ತಾರ ಎ.ಎಸ್.ಪೊನ್ನಣ್ಣ ಮಾತನಾಡಿ ಕೊಡಗಿನಲ್ಲಿ ಬಿಜೆಪಿ ಒಡೆದ ಮನೆಯಾಗಿದ್ದು, ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಂಥರ್ ಗೌಡ ಬಹುಮತ ಗಳಿಸಲಿದ್ದಾರೆ ಎಂದರು.
ಜಿಲ್ಲೆಯ ಬಿಜೆಪಿ ಶಾಸಕರಿಗೆ ಸಚಿವ ಸ್ಥಾನ ನೀಡುವ ಸಂದರ್ಭ ಯಾವುದೋ ಬೇತಾಳ ಅಡ್ಡಿಯಾಗಿತ್ತಂತೆ, ಇದೀಗ ಸುನೀಲ್ ಸುಬ್ರಮಣಿ ಅವರಿಗೆ ಮತ್ತೊಮ್ಮೆ ಸ್ಪರ್ಧಿಸಲು ಅವಕಾಶ ದೊರೆಯದೆ ಇರಲು ಬೇತಾಳವೇ ಅಡ್ಡಿಯಾಗಿರಬಹುದೇ ಎಂದು ವ್ಯಂಗ್ಯವಾಡಿದ ಅವರು, ಬಿಜೆಪಿಯಲ್ಲಿ ಎಲ್ಲವೂ ಸರಿಯಾಗಿಲ್ಲವೆಂದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಶಾಂತೆಯoಡ ವೀಣಾಅಚ್ಚಯ್ಯ, ಅಭ್ಯರ್ಥಿ ಮಂಥರ್ ಗೌಡ, ಪ್ರಮುಖರಾದ ಕೆ.ಎಂ.ಲೋಕೇಶ್ ಹಾಗೂ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಎಂ.ಎ.ಉಸ್ಮಾನ್ ಉಪಸ್ಥಿತರಿದ್ದರು.