ಕಡಗದಾಳು : ಮರದ ಕೊಂಬೆ ಬಿದ್ದು ಮಹಿಳೆ ಸಾವು

24/11/2021

ಮಡಿಕೇರಿ ನ.24 : ತೋಟದಲ್ಲಿ ಕಾಫಿ ಕುಯ್ಯುತ್ತಿದ್ದ ಸಂದರ್ಭ ಮರದ ಕೊಂಬೆ ಬಿದ್ದು, ಮಹಿಳೆಯೊಬ್ಬರು ಮೃತಪಟ್ಟು, ಮತ್ತೋರ್ವ ಮಹಿಳೆ ಗಂಭೀರವಾಗಿ ಗಾಯಗೊಂಡು ಘಟನೆ ಕಡಗದಾಳು ಬೊಟ್ಲಪ್ಪ ಪೈಸಾರಿಯ ತೋಟವೊಂದರಲ್ಲಿ ನಡೆದಿದೆ. ಪುಷ್ಪ(43) ಎಂಬುವವರೇ ಮೃತಪಟ್ಟ ಮಹಿಳೆಯಾಗಿದ್ದಾರೆ.
ಬೊಟ್ಲಪ್ಪ ಪೈಸಾರಿಯ ತೋಟದಲ್ಲಿ ಎಂದಿನoತೆ ಕಾರ್ಮಿಕರು ಕಾಫಿ ಕುಯಿಲು ಮಾಡುತ್ತಿದ್ದರು. ಈ ವೇಳೆ ನಂದಿ ಮರದ ಕೊಂಬೆಯೊoದು ಬಿದ್ದಿದೆ. ಪರಿಣಾಮ ಪುಷ್ಪ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸುವ ಸಂದರ್ಭ ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ.
ಸ್ಥಳದಲ್ಲಿ ಇನ್ನೂ ಆರು ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಕೊಂಬೆಗಳು ಬೀಳುತ್ತಿದ್ದ ದೃಶ್ಯವನ್ನು ಕಂಡ ಪ್ರೇಮಾ ಎಂಬವರು ಬೊಬ್ಬೆ ಹಾಕಿದಾಗ ಇತರರು ಸ್ಥಳದಿಂದ ಓಡಿ ಅಪಾಯದಿಂದ ತಪ್ಪಿಸಿಕೊಂಡಿದ್ದಾರೆ. ಆದರೆ ಮತ್ತೋರ್ವ ಮಹಿಳೆ ಪುಷ್ಪ ಎಂಬವರು ಮರದ ಕೊಂಬೆಗಳ ನಡುವೆ ಸಿಲುಕಿಕೊಂಡಿದ್ದಾರೆ. ಪರಿಣಾಮ ಅವರ ಬಲಭುಜಕ್ಕೆ ಗಂಭೀರ ಗಾಯವಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಸದಾಶಿವ ಮತ್ತು ಸಿಬ್ಬಂದಿಗಳು ಘಟನಾ ಸ್ಥಳ್ಕಕೆ ತೆರಳಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.