ಸೋಮವಾರಪೇಟೆ : ರೈತರಿಗೆ ಕಿರುಕುಳ ನೀಡಿದರೆ ಹೋರಾಟ : ರೈತ ಸಂಘಟನೆಗಳ ಎಚ್ಚರಿಕೆ

24/11/2021

ಸೋಮವಾರಪೇಟೆ ನ.24 : ಅಕಾಲಿಕ ಮಳೆಯಿಂದ ತಾಲೂಕಿನ ಎಲ್ಲ ಗ್ರಾಮಗಳಲ್ಲೂ ದೊಡ್ಡ ಪ್ರಮಾಣದಲ್ಲಿ ಬೆಳೆಹಾನಿಯಾಗಿದ್ದು, ಪ್ರತಿಯೊಬ್ಬ ರೈತನಿಗೂ ಸರ್ಕಾರ ಹಾನಿ ಪರಿಹಾರ ನೀಡಬೇಕೆಂದು ರೈತ ಸಂಘಟನೆಯ ಪ್ರಮುಖರು ಒತ್ತಾಯಿಸಿದ್ದಾರೆ.
ವಿವಿಧ ಇಲಾಖೆಗಳ ಅವೈಜ್ಞಾನಿಕ ವರದಿ ಹಾಗೂ ಅಧಿಕಾರಿಗಳ ತಾರಾತಮ್ಯ ನೀತಿಯಿಂದ ಕಳೆದ ಹಲವಾರು ವರ್ಷಗಳಿಂದ ಹೆಚ್ಚಿನ ಗ್ರಾಮಗಳ ಕಾಫಿ, ಕಾಳುಮೆಣಸು ಬೆಳೆಯುವ ರೈತರು ಪರಿಹಾರ ಹಣದಿಂದ ವಂಚಿತರಾಗಿದ್ದಾರೆ ಎಂದು ರಾಜ್ಯ ರೈತ ಸಂಘದ ತಾಲೂಕು ಉಪಾಧ್ಯಕ್ಷ ಎ.ಆರ್.ಕುಶಾಲಪ್ಪ ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಇದುವರಗೆ ವೈಜ್ಞಾನಿಕ ಬೆಳೆಹಾನಿ ಸರ್ವೆ ನಡೆಯಿತ್ತಿಲ್ಲ. ಶನಿವಾರಸಂತೆ, ಕೊಡ್ಲಿಪೇಟೆ, ಸೋಮವಾರಪೇಟೆ ಕಸಬ ಹೋಬಳಿಯ ರೈತರಿಗೆ ಅನ್ಯಾವಾಗುತ್ತಿದೆ. ಹಿಂಗಾರು, ಮುಂಗಾರು ಮಳೆಯಲ್ಲಿ ಬೆಳೆಹಾನಿಯಾಗುತ್ತಿದೆ. 2018ರಿಂದಲೂ ಬೆಳೆಹಾನಿ ಪರಿಹಾರದಿಂದ ವಂಚಿತರಾಗಿದ್ದಾರೆ ಎಂದು ಹೇಳಿದರು. ಈ ಬಾರಿಯಾದರೂ ಸೂಕ್ತ ಪರಿಹಾರ ನೀಡದಿದ್ದರೆ ಸರ್ಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ವಾಣಿಜ್ಯ ಬ್ಯಾಂಕ್‌ಗಳು ಹಾಗು ಉಪನೋಂದಾಣಾಧಿಕಾರಿ ಇಲಾಖೆಯ ನಡುವಿನ ಸಮನ್ವಯತೆ ಕೊರತೆಯಿಂದ ರೈತ ಸಾಲಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಗಣಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳವೆಬಾವಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಎಸ್.ಚಂದ್ರಶೇಖರ್ ಹೇಳಿದರು. ಬ್ಯಾಂಕ್‌ಗಳಿಗೆ ಸಾಲ ಮರುಪಾವತಿ ಮಾಡಿದ 24 ಗಂಟೆಯೊಳಗೆ ಉಪನೋಂದಾಣಾಧಿಕಾರಿ ಕಚೇರಿಯಿಂದ ಎನ್‌ಡಿಸಿ (ನೋ ಡ್ಯೂ ಸರ್ಟಿಪಿಕೇಟ್) ಕೊಡಲಾಗುತ್ತಿತ್ತು. ಆದರೆ ಈಗ ಒಂದು ವಾರ ಕಳೆದರೂ ಅಧಿಕಾರಿಗಳು ಕೊಡುತ್ತಿಲ್ಲ ಎಂದು ದೂರಿದರು. ಪ್ರಶ್ನಿಸಿದರೆ ಉಡಾಫೆ ಉತ್ತರ ನೀಡುತ್ತಿದ್ದಾರೆ. ಅಕಾಲಿಕ ಮಳೆಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಈ ಸಂದರ್ಭ ಎರಡು ಇಲಾಖೆಯ ಅಧಿಕಾರಿಗಳು ರೈತರಿಗೆ ಕಿರುಕುಳ ನೀಡುವುದನ್ನು ಮುಂದುವರಿಸಿದರೆ ಅಂತಹ ಬ್ಯಾಂಕಗಳು ಹಾಗು ಉಪನೋಂದಾಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಗೋಷ್ಠಿಯಲ್ಲಿ ರೈತ ಸಂಘದ ಸಂಚಾಲಕ ಎಚ್.ಬಿ.ರಾಜಪ್ಪ, ಕೃಷಿಕರಾದ ಬಾಣವರ ರೇವಣ್ಣ, ಗಣಗೂರು ಶರತ್ ಇದ್ದರು.